ಕನ್ನಡಪ್ರಭ ವಾರ್ತೆ ಕುಮಟಾ

ತಾಲೂಕಿನಾದ್ಯಂತ ಭಾನುವಾರ ಮಹಾಶಿವರಾತ್ರಿ ಉತ್ಸವವನ್ನು ಶ್ರದ್ಧಾಭಕ್ತಿ, ಪಾರಂಪರಿಕ ಮಹತ್ವದೊಂದಿಗೆ ಆಚರಿಸಿದ್ದು, ಪ್ರಸಿದ್ಧ ಶಿಲಾಶಿಖರವುಳ್ಳ ಯಾಣದಲ್ಲಿ ಭೈರವೇಶ್ವರನ ದರ್ಶನಕ್ಕೆ ಬೆಳಗಿನ ಜಾವದಿಂದಲೇ ಸರತಿಯಲ್ಲಿ ಭಕ್ತರು ನಿಂತು ಶಿಲಾಗುಹಾಂತರ್ಗತ ಗಂಗಾಚಂಡಿಕಾ ಶ್ರೀ ಭೈರವೇಶ್ವರ ದೇವರಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.

ಪ್ರತಿವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿವರಾತ್ರಿ ಪುಣ್ಯದರ್ಶನ ಮಾಡಿದ್ದಾರೆ. ಶಿಖರದ ಗೂಡುಗಳಲ್ಲಿನ ಜೇನುಹುಳಗಳು ಕಚ್ಚುವ ಆತಂಕದ ನಡುವೆಯೂ ಶಿವಭಕ್ತರ ದರ್ಶನಭಾಗ್ಯ ನಿರಾತಂಕವಾಗಿ ನಡೆಯಿತು. ಶಿವರಾತ್ರಿ ಪ್ರಯುಕ್ತ ಯಾಣಕ್ಕೆ ಕುಮಟಾ ಹಾಗೂ ಶಿರಸಿ ಕಡೆಯಿಂದ ಸಾರಿಗೆ ಇಲಾಖೆಯು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ರಾತ್ರಿ ಜಾತ್ರಾ ಪ್ರಯುಕ್ತ ಊರ ನಾಗರಿಕರ ಸಹಕಾರದಲ್ಲಿ ದೇವಾಲಯ ಟ್ರಸ್ಟ್‌ನವರು ಪ್ರಸಿದ್ಧ ಕಲಾವಿದರಿಂದ ಶನೈಶ್ಚರ ಮಹಾತ್ಮೆ ಯಕ್ಷಗಾನ ಪ್ರದರ್ಶನದ ಮೂಲಕ ಜಾಗರಣೆ ಸೇವೆಗೈದರು.

ಧಾರೇಶ್ವರದಲ್ಲಿ ಮಾತೋಬಾರ ಶ್ರೀ ಧಾರಾನಾಥ ಮಂದಿರದಲ್ಲಿ ಪ್ರತಿವರ್ಷದಂತೆ ಆಗಮಿಸಿದ ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಭಕ್ತರು ಹೆದ್ದಾರಿಯಂಚಿನ ಮಹಾದ್ವಾರದಿಂದಲೇ ಸರತಿ ಸಾಲಿನಲ್ಲಿ ನಿಂತು ಗರ್ಭಗುಡಿ ಪ್ರವೇಶಿಸಿ ಅಭಿಷೇಕ ಸೇವೆಗೈದರು. ಶಿವರಾತ್ರಿ ಪ್ರಯುಕ್ತ ಇಲ್ಲಿ ಎಲ್ಲ ಭಕ್ತಾದಿಗಳಿಗೆ ಸ್ವತಃ ಶಿವಲಿಂಗಕ್ಕೆ ಪತ್ರೆಪುಷ್ಪ ಸಮರ್ಪಣೆ, ಜಲಾಭಿಷೇಕಕಕ್ಕೆ ಅವಕಾಶವಿರುವುದರಿಂದ ಗೋಕರ್ಣ ಆತ್ಮಲಿಂಗದಂತೆಯೇ ಭಕ್ತಾದಿಗಳು ತಾಸುಗಟ್ಟಲೆಯಾದರೂ ಕಾದು ಶಿವದರ್ಶನ ಪಡೆದರು.

ಯಾಣದಂತೆಯೇ ಸುಂದರ ಪ್ರಾಕೃತಿಕ ಸೌಂದರ್ಯದ ನಡುವೆ ಗುಡ್ಡದ ಬೋಳೆಯ ಮೇಲೆ ಸ್ಥಿತವಾಗಿರುವ ಮಾಸೂರು ದೇವರಬೋಳೆ ಶಂಭುಲಿಂಗ ದೇವಸ್ಥಾನಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಶಿವರಾತ್ರಿಯ ಪುಣ್ಯಪರ್ವದ ಭಾಜನರಾದರು. ಕುಮಟಾ ಪಟ್ಟಣದ ಗ್ರಾಮದೇವರು ಕುಂಭೇಶ್ವರ ಮಂದಿರದಲ್ಲೂ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರ ಭಕ್ತರ ಆಗಮನ ಹಾಗೂ ಪೂಜಾ ಸೇವೆ ನಡೆಯಿತು. ಉಳಿದಂತೆ ಗ್ರಾಮೀಣ ಶಿವಮಂದಿರಗಳಲ್ಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಶಿವನ ದರ್ಶನ ಪಡೆದು ಮಹಾಶಿವರಾತ್ರಿಯ ಪೂಜೆ ಸಮರ್ಪಿಸಿದರು. ಇನ್ನು ಕಲ್ಲಬ್ಬೆಯ ನಂದಿಕೇಶ್ವರ, ನಾಗೂರಿನ ಸಂತೆಗದ್ದೆಯ ಬೃಹದೇಶ್ವರ, ಪರ್ವತಬೆಟ್ಟದ ಪರ್ವತೇಶ್ವರ, ಅಂತ್ರವಳ್ಳಿಯ ಈಶ್ವರ ದೇವಸ್ಥಾನ, ಕೊಪ್ಪಳಕರವಾಡಿಯ ಅರುಣಾಚಲೇಶ್ವರ, ಉಪ್ಪಿನಗಣಪತಿ ಈಶ್ವರದೇವ, ಅಘನಾಶಿನಿಯ ಸದಾಶಿವ ಮಂದಿರ, ಮೂರೂರು ಗ್ರಾಮದೇವ ಶಂಭುಲಿಂಗ ಮುಂತಾದೆಡೆ ಶಿವರಾತ್ರಿ ಪ್ರಯುಕ್ತ ಜನರು ವಿಶೇಷ ಪೂಜೆ ಸಲ್ಲಿಸಿದರು. ಕೆಲವೆಡೆ ಶಿವನಿಗೆ ವಿಶೇಷ ಅಲಂಕಾರದೊಂದಿಗೆ ದರ್ಶನ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ ಜಾಗರಣೆ ಪ್ರಯುಕ್ತ ಭಜನೆ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು.