ಮುಳ್ಳು ರಾಶಿಯಲ್ಲಿ ಹಾರಿ ಹರಿಕೆ ತೀರಿಸುವ ಭಕ್ತರು

| Published : Apr 08 2025, 12:36 AM IST

ಸಾರಾಂಶ

ಆಂಜನೇಯ ಅಥವಾ ಮಾರುತೇಶ್ವರ ಜಾತ್ರೆಯ ನಿಮಿತ್ತ ಮುಳ್ಳು ಹರಕೆ ತೀರಿಸುತ್ತಾರೆ. ಕೆಲ ಗ್ರಾಮಗಳಲ್ಲಿ ಮುಳ್ಳಿನ ಗಿಡ ಕಿತ್ತುಕೊಂಡು ಬಂದು ಕುಣಿಯುತ್ತಾರೆ. ಬ್ಯಾಟಿ ಗಿಡವನ್ನು ದೇವರ ಪೂಜಾರಿ ಕಿತ್ತುಕೊಂಡು ಬಂದು ಕುಣಿಯುವುದು ಕೆಲವೇ ಗ್ರಾಮಗಳಲ್ಲಿ ನಡೆಯುತ್ತದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಉತ್ತರ ಕರ್ನಾಟಕದಾದ್ಯಂತ ನಡೆಯುವ ಮಾರುತೇಶ್ವರ ಜಾತ್ರೆಯಲ್ಲಿ ಭಕ್ತರು ಮುಳ್ಳು ಕೊಂಪೆಯಲ್ಲಿ (ರಾಶಿಯಲ್ಲಿ) ಬರಿಮೈಲಿ ಹಾರುವ ಸಂಪ್ರದಾಯವಿದೆ. ದೊಡ್ಡದಾದ ಮುಳ್ಳಿನ ರಾಶಿ ಹಾಕಿ ಅಬಾಲ ವೃದ್ಧರಾಗಿ ಮಾಳಿಗೆಯಿಂದ ಜಿಗಿದು ಅದರಲ್ಲಿ ಹೊರಳಾಡುತ್ತಾರೆ. ಕೆಲವರು ಮೈಮೇಲೆ ದೇವರು ಬಂದಂತೆ ಕುಣಿಯುತ್ತಾರೆ.

ಹೌದು..ಇಂತಹ ಸಂಪ್ರದಾಯ ತಾಲೂಕಿನ ದದೆಗಲ್‌ ಗ್ರಾಮದ ಶ್ರೀಮಾರುತೇಶ್ವರ ಜಾತ್ರೆಯಲ್ಲಿ ನಡೆದಿದ್ದು ಭಕ್ತರು ಮುಳ್ಳು ಹರಕೆ ತೀರಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮುಳ್ಳಿನ ಕೊಂಪೆ ಹಾಕುತ್ತಾರೆ. ಈ ವೇಳೆ ಡೊಳ್ಳು ವಾದ್ಯದ ಬಡಿತದಿಂದ ಕೆಲವರು ಆವೇಶ ಬಂದು ಮುಳ್ಳಿನಲ್ಲಿ ಜಿಗಿಯುತ್ತಾರೆ. ಇನ್ನು ಕೆಲವರು ಮನೆಯ ಮೇಲಿಂದಲೂ ಜಿಗಿಯುತ್ತಾರೆ. ಇದು ಮೆರವಣಿಗೆ ರೂಪದಲ್ಲಿ ನಡೆಯುತ್ತದೆ. ಆಗಾಗ ಮುಳ್ಳು ಕೊಂಪೆಯ ಸ್ಥಳ ಬದಲಾಯಿಸುತ್ತಾ ದೇವಸ್ಥಾನ ತಲುಪುತ್ತಾರೆ.

ಏನಿದು ಸಂಪ್ರದಾಯ:

ಆಂಜನೇಯ ಅಥವಾ ಮಾರುತೇಶ್ವರ ಜಾತ್ರೆಯ ನಿಮಿತ್ತ ಮುಳ್ಳು ಹರಕೆ ತೀರಿಸುತ್ತಾರೆ. ಕೆಲ ಗ್ರಾಮಗಳಲ್ಲಿ ಮುಳ್ಳಿನ ಗಿಡ ಕಿತ್ತುಕೊಂಡು ಬಂದು ಕುಣಿಯುತ್ತಾರೆ. ಬ್ಯಾಟಿ ಗಿಡವನ್ನು ದೇವರ ಪೂಜಾರಿ ಕಿತ್ತುಕೊಂಡು ಬಂದು ಕುಣಿಯುವುದು ಕೆಲವೇ ಗ್ರಾಮಗಳಲ್ಲಿ ನಡೆಯುತ್ತದೆ. ಆದರೆ, ಮುಳ್ಳು ಕೊಂಪೆಯಲ್ಲಿ ಜಿಗಿದು ಹರಕೆ ತೀರಿಸುವುದು ಬಹುತೇಕ ಗ್ರಾಮಗಳಲ್ಲಿ ನಡೆಯುತ್ತದೆ.

ಯಾವ ಮಳ್ಳು:

ದೇ ಗುಡಿಯಲ್ಲಿ ಪೂಜೆ ಸಲ್ಲಿಸಿ, ಗ್ರಾಮಸ್ಥರು ಹೊರವಲಯದಲ್ಲಿ ಮೊದಲೇ ಕಾರಿ ಮುಳ್ಳಿನ ಗಿಡ ಗುರುತಿಸಿ ನೀರು ಹಾಕಿರುತ್ತಾರೆ. ಅಂಥ ಕಾರಿ ಗಿಡ ಪೂಜಿಸಿ ಕಿತ್ತುಕೊಂಡು, ದೊಡ್ಡ ಕೊಂಪೆ ಮಾಡುತ್ತಾರೆ. ಅದನ್ನು ಗ್ರಾಮದಲ್ಲಿ ತಂದು ಮೆರವಣಿಗೆ ಮಾಡುತ್ತಾರೆ. ಹೀಗೆ ಮೆರವಣಿಗೆ ಮಾಡುವ ವೇಳೆ ಪುರಷರು ಜಿಗಿದಾಡಿ ಹರಕೆ ತೀರಿಸುತ್ತಾರೆ.

ಮುಳ್ಳು ಚುಚ್ಚಲ್ಲ:

ಕಾರಿ ಮುಳ್ಳು ಗಿಡ ಕಿತ್ತುಕೊಂಡು ಬಂದು ಕೊಂಪೆ ಮಾಡಿದ ಮೇಲೆ ನೀರು ಸುರಿಯುತ್ತಾರೆ. ಇದರಿಂದ ಮುಳ್ಳು ಮೆತ್ತಗಾಗಿ ಅದರ ಮೇಲೆ ಜಿಗಿಯುವ ಭಕ್ತರಿಗೆ ಮುಚ್ಚುವುದಿಲ್ಲ. ಕೆಲ ಸಂದರ್ಭದಲ್ಲಿ ಮುಳ್ಳು ಚುಚ್ಚಿದ್ದರೂ ದೇವರ ಆಶೀರ್ವಾದವೆಂದು ಭಕ್ತರು ತಿಳಿದುಕೊಳ್ಳುತ್ತಾರೆ.ನಮ್ಮೂರಲ್ಲಿ ಇದು ತಲೆತಲಾಂತದಿಂದ ನಡೆದುಕೊಂಡು ಬಂದಿದೆ. ಕಾರಿ ಗಿಡದ ಕೊಂಪೆ ಮಾಡಿಕೊಂಡು ಬಂದು ಮೆರವಣಿಗೆ ಮಾಡಲಾಗುತ್ತದೆ. ಅದರಲ್ಲಿ ಬೇಡಿಕೊಂಡಿರುವ ಭಕ್ತರು ಹಾರಿ, ಕುಣಿದಾಡಿ ಹರಕೆ ತೀರಿಸುತ್ತಾರೆ.

ಗವಿಸಿದ್ದಪ್ಪ ದದೆಗಲ್ ಗ್ರಾಮಸ್ಥ