ಶ್ರೀಅವಧೂತ ಶುಖಮುನಿ ಸ್ವಾಮಿಗಳ ದೇವಸ್ಥಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದ್ದು
ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ದೋಟಿಹಾಳದ ಶುಖಮುನಿ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಬೇಕೆಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ, ಅಭಿವೃದ್ಧಿಗೆ ಮುಂದಾಗದಿರಲು ಕಾರಣವೇನು ಎಂಬುದು ಇಲ್ಲಿನ ಭಕ್ತರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.ಶ್ರೀಅವಧೂತ ಶುಖಮುನಿ ಸ್ವಾಮಿಗಳ ದೇವಸ್ಥಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ಅನೇಕ ವರ್ಷಗಳಿಂದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ. ಕುಷ್ಟಗಿ ತಾಲೂಕು ತಹಸೀಲ್ದಾರ ಅವರು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರೂ ಸಹಿತ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಿಂದೇಟು ಹಾಕುತ್ತಿರುವದು ವಿಪರ್ಯಾಸದ ಸಂಗತಿಯಾಗಿದೆ ಎನ್ನುತ್ತಾರೆ ಭಕ್ತರು.
ಕುಷ್ಟಗಿ ತಾಲೂಕಿನಲ್ಲಿ ಶುಖಮುನಿ ಸ್ವಾಮಿಗಳ ದೇವಸ್ಥಾನ ಪ್ರಸಿದ್ಧವಾಗಿದ್ದು, ಹಬ್ಬ, ಹರಿದಿನ, ಅಮಾವಾಸ್ಯೆಯಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಸಮರ್ಪಕ ಸ್ನಾನಗೃಹ, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುವಂತಾಗಿದ್ದು ಜಾತ್ರೆ ಮತ್ತು ಇನ್ನಿತರ ಪೂಜೆ, ಪುನಸ್ಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವ ಭಕ್ತಾದಿಗಳಿಗೆ ಅಗತ್ಯವಿರುವ ಸ್ನಾನಗೃಹ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯ ಇರುವುದಿಲ್ಲ. ಆಡಳಿತ ಮಂಡಳಿಯವರು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.ಹತ್ತು ದಿನ ಜಾತ್ರೆ:ಶಿವರಾತ್ರಿ ಅಮಾವಾಸ್ಯೆಯಂದು ನಡೆಯುವ ಜಾತ್ರೆಯು ಸುಮಾರು ಹತ್ತು ದಿನಗಳ ಕಾಲ ನಡೆಯುತ್ತಿದ್ದು, ಸುಮಾರು ಎಂಟು ದಿನ ಅದ್ಧೂರಿ ಪಲ್ಲಕ್ಕಿ ಉತ್ಸವ, ಸಪ್ತ ಭಜನೆ ಸೇರಿದಂತೆ ಅನ್ನ ದಾಸೋಹ ಕಾರ್ಯಕ್ರಮ ನಡೆಯುತ್ತದೆ.
ದೋಟಿಹಾಳ ಗ್ರಾಮದ ಶುಖಮುನಿ ಸ್ವಾಮಿಗಳ ದೇವಸ್ಥಾನ ಈ ಭಾಗದ ಶಕ್ತಿಪೀಠ, ಧಾರ್ಮಿಕ ಕ್ಷೇತ್ರವಾಗಿದ್ದು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಾಡುತ್ತಿದೆ. ಫೆ.17ರಂದು ಜಾತ್ರಾಮಹೋತ್ಸವ ನಡೆಯುತ್ತಿದ್ದು ಜಾತ್ರೆಗೆ ಬಂದವರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆವಿದ್ದು ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಾಗಿದೆ.ಬೇಡಿಕೆಗಳು:ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಯಾತ್ರಿ ನಿವಾಸ, ದಾಸೋಹ ಕೊಠಡಿ, ಪೂಜಾ ಸಾಮಗ್ರಿಗಳ ಮಾರಾಟಕ್ಕೆ ಮಳಿಗೆ ನಿರ್ಮಾಣ, ಉದ್ಯಾನವನ ನಿರ್ಮಿಸಬೇಕು ಮತ್ತು ಕುಷ್ಟಗಿ ಹಾಗೂ ಕ್ಯಾದಿಗುಪ್ಪಾ ರಾಷ್ಟ್ರೀಯ ಹೆದ್ದಾರಿಯಿಂದ ಶುಖಮುನಿ ಸ್ವಾಮಿಗಳ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಮಹಾದ್ವಾರ ನಿರ್ಮಿಸಬೇಕೆಂದು ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಒತ್ತಾಸೆಯಾಗಿದ್ದು ಈ ಕುರಿತು ಹಲವು ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ನಿವಾಸಿಗಳು.
ದೋಟಿಹಾಳ ಶುಖಮುನಿ ತಾತನ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಜಾತ್ರೆ ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಮುಂದಾಗಬೇಕು ಎಂದು ಸಮಾಜ ಸೇವಕ ಶ್ರೀನಿವಾಸ ಕಂಟ್ಲಿ ತಿಳಿಸಿದ್ದಾರೆ.ದೇವಸ್ಥಾನಕ್ಕೆ ಅಗತ್ಯವಿರುವ ಸೌಲಭ್ಯಗಳ ಕುರಿತು ಹಲವು ಸಲ ಮನವಿ ಸಲ್ಲಿಸಲಾಗಿದೆ. ಪೂರ್ವಭಾವಿ ಸಭೆಯಲ್ಲಿ ಅನೇಕ ಸಲ ತಿಳಿಸಿದರೂ ಕಮೀಟಿಯವರು ಕ್ರಮಕ್ಕೆ ಮುಂದಾಗುತ್ತಿಲ್ಲ ಜಾತ್ರಾ ದಿನದಂದು ದೇವಸ್ಥಾನ ಸುತ್ತಲೂ ಸ್ವಚ್ಛತೆ ಕಾಪಾಡುವ ಕೆಲಸವಾಗಬೇಕು ಎಂದು ದೋಟಿಹಾಳ ಮಾಜಿ ಗ್ರಾಪಂ ಸದಸ್ಯ ಮುತ್ತಣ್ಣ ಕಾಟಾಪೂರು ತಿಳಿಸಿದ್ದಾರೆ.