ನಗರದ ಸೋಮೇಶ್ವರ ದೇವಾಲಯ, ಬಿ.ಎಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮೀ ದೇವಾಲಯ, ಉಮಾಮಹೇಶ್ವರ ದೇವಾಲಯ ಸೇರಿ ವಿವಿಧ ಬಡಾವಣೆಯಲ್ಲಿರುವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾದಿ ಕೈಂಕರ್ಯ ನೆರವೇರಿದವು.

ಕನ್ನಡಪ್ರಭ ವಾರ್ತೆ ತುಮಕೂರು

ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಕಲ್ಪತರು ನಾಡು ತುಮಕೂರು ನಗರ ಸೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ರೈತನ ಬೆನ್ನೆಲುಬಾಗಿ ಇಡೀ ವರ್ಷವೆಲ್ಲಾ ದುಡಿದ ಎತ್ತುಗಳಿಗೆ ಸಂಕ್ರಾಂತಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆಯೇ ಎತ್ತುಗಳ ಮೈ ತೊಳೆದು, ಸಿಂಗಾರಗೊಳಿಸಿ ಪೂಜೆ ಮಾಡಲಾಗುತ್ತದೆ. ಹೀಗೆ ಜಿಲ್ಲೆಯ ವಿವಿಧೆಡೆ ರೈತರು ತಮ್ಮ ರಾಸುಗಳನ್ನು ಸಿಂಗರಿಸಿ ದೇವಾಲಯಗಳಿಗೆ ಕರೆ ತಂದು ಪೂಜೆ ಸಲ್ಲಿಸಿದರು.

ನಗರದ ಸೋಮೇಶ್ವರ ದೇವಾಲಯ, ಬಿ.ಎಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮೀ ದೇವಾಲಯ, ಉಮಾಮಹೇಶ್ವರ ದೇವಾಲಯ ಸೇರಿ ವಿವಿಧ ಬಡಾವಣೆಯಲ್ಲಿರುವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾದಿ ಕೈಂಕರ್ಯ ನೆರವೇರಿದವು.

ಸುಗ್ಗಿ ಸಂಭ್ರಮ ಹಬ್ಬವಾದ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ನಾಡಿನಾದ್ಯಂತ ಆಚರಿಸುತ್ತಿದ್ದು, ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ದೇವಾಲಯಗಳಿಗೆ ತೆರಳಿ ಎಳ್ಳು- ಬೆಲ್ಲ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಮಹಿಳೆಯರು, ಯುವತಿಯರು, ಮಕ್ಕಳು ಹೊಸ ಉಡುಪುಗಳನ್ನು ಧರಿಸಿ ಖುಷಿಯಿಂದಲೇ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ನಂತರ ಸ್ನೇಹಿತರು, ಅಕ್ಕಪಕ್ಕದ ಮನೆಯವರಿಗೆ ಎಳ್ಳು- ಬೆಲ್ಲ ಹಂಚಿ ಹಬ್ಬವನ್ನು ಆಚರಿಸಿದರು.

ಗ್ರಾಮೀಣ ಭಾಗದ ರೈತರಿಗೆ ಸುಗ್ಗಿಯ ಸಂಭ್ರಮದ ಹಬ್ಬ ಇದಾಗಿರುವುದರಿಂದ ಕಣದಲ್ಲಿ ಒಕ್ಕಣೆ ಮಾಡುತ್ತಿರುವ ರೈತರು ರಾಗಿ ರಾಶಿಗೆ ಪೂಜೆ ಸಲ್ಲಿಸಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.