ಸಾರಾಂಶ
ಮುನಿರಾಬಾದ್: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಸೀಗೆ ಹುಣ್ಣಿಮೆ ಪ್ರಯುಕ್ತ ಮಂಗಳವಾರ ಅಪಾರ ಪ್ರಮಾಣದಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ಹಲವಾರು ಬಾರಿ ನೂಕುನುಗ್ಗಲು, ಕಾಲ್ತುಳಿತ, ಗೊಂದಲ, ಮೇಲಾಟ ನಡೆಯಿತು. ಭಕ್ತರು ಹೇಗಾದರೂ ದೇವಿಯ ದರ್ಶನಕ್ಕೆ ಮುಂದಾದಾಗ ಪರಿಸ್ಥಿತಿ ಬಿಗಡಾಯಿಸಿತ್ತು.
ದೇವಿಯ ದರ್ಶನಕ್ಕೆ ಬೆಳಗ್ಗೆಯಿಂದ ಜನರು ಕಿಕ್ಕಿರಿದು ಸೇರಿದ್ದರು. ದೇವಸ್ಥಾನ ಆವರಣ ಸೇರಿದಂತೆ ಇಡೀ ಹುಲಿಗಿ ಗ್ರಾಮದ ತುಂಬೆಲ್ಲ ಅಪಾರ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ಲಕ್ಷ ಲಕ್ಷ ಭಕ್ತರು ದೇವಿ ದರ್ಶನಕ್ಕೆ ಕಾತರದಿಂದ ಆಗಮಿಸಿದ್ದು ಕಂಡು ಬಂದಿತು. ಶೀಗೆ ಹುಣ್ಣಿಮೆ ಜೊತೆಯಲ್ಲಿ ಮಂಗಳವಾರವೂ ಆಗಿದ್ದರಿಂದ ದೇವಿಯ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತ ಸಾಗರ ಬಂದಿತ್ತು.ಪಾದಯಾತ್ರಿಗಳು:ಹಲವಾರು ಗ್ರಾಮ, ಊರುಗಳಿಂದ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಆಗಮಿಸಿ ದೇವಿಯ ದರ್ಶನ ಪಡೆದರು. ಪಾದಯಾತ್ರಿಗಳಿಗೆ ಅವರು ಬರುವ ಮಾರ್ಗದ ಗ್ರಾಮಸ್ಥರು ಅಗತ್ಯ ಸೌಲಭ್ಯ ಒದಗಿಸಿದ್ದರು.
ತುಂಬಿದ ರೋಡ್, ಕಿಕ್ಕಿರಿದ ಜನ:ಹುಲಿಗೆಮ್ಮ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಜನ ಆಗಮಿಸಿದ ಹಿನ್ನೆಲೆ ಅಧಿಕ ವಾಹನಗಳ ಆಗಮಿಸಿದ್ದವು. ಇದರಿಂದ ಟ್ರಾಫಿಕ ಜಾಮ್ ಉಂಟಾಗಿತ್ತು. ಹುಲಿಗಿಯ ರೋಡ್ ಸಂಪೂರ್ಣವಾಗಿ ವಾಹನಗಳಿಂದ ತುಂಬಿತ್ತು. ಸರಿಯಾದ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ಇರದ ಕಾರಣ ಟ್ರಾಫಿಕ್ ಜಾಮ್ ನಲ್ಲಿ ಭಕ್ತಾದಿಗಳು ಸಿಲುಕಿ ಪರದಾಡಿದರು. ಒಳ ಬಂದ ವಾಹನ ತೆರಳಲು ಸಾಧ್ಯವೇ ಇರಲಿಲ್ಲ. ಗಂಟೆಗೂ ಹೆಚ್ಚು ಕಾಲ ನಿಂತ ವಾಹನ ನಿಂತಲ್ಲಿಯೇ ಇತ್ತು.ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪಾದಯಾತ್ರೆ ಮೂಲಕ ಕೊನೆಗೂ ದೇವಸ್ಥಾನದ ಸ್ವಾಗತ ಕಮಾನು ಬಳಿ ಬಂದಾಗ ಭಕ್ತಾದಿಗಳಿಗೆ ಮತ್ತೊಂದು ಸಮಸ್ಯೆ ಎದುರಾಯಿತು. ಸಾಮಾನ್ಯವಾಗಿ ಹುಣ್ಣಿಮೆ ದಿನದಲ್ಲಿ ಕಾರುಗಳನ್ನು ಗ್ರಾಮದ ಹೊರವಲಯದಲ್ಲಿ ಶಿವಪುರ ರಸ್ತೆಯಲ್ಲಿ ಹಾಗೂ ಹೊಸಪೇಟೆ ಕಡೆಯಿಂದ ಬರುವ ವಾಹನಗಳನ್ನು ಕೋರಮಂಡಲ ಕಾರ್ಖಾನೆ ಎದುರುಗಡೆ ನಿಲುಗಡೆ ಮಾಡಲಾಗುತ್ತಿತ್ತು ಇದರ ಉದ್ದೇಶ ರಸ್ತೆ ಸಂಚಾರ ಸುಗಮವಾಗಬೇಕೆಂಬುದು. ಆದರೆ ಮಂಗಳವಾರ ಕಾರುಗಳನ್ನು ಸಹ ಬಿಡಲಾಯಿತು ಇದರಿಂದ ಹುಲಗಿ ಗ್ರಾಮದ ನಂದಿ ವೃತ್ತದಿಂದ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳುತ್ತಿದ್ದ ಲಕ್ಷಾಂತರ ಭಕ್ತಾದಿಗಳಿಗೆ ಭಾರಿ ತೊಂದರೆ ಉಂಟಾಯಿತು. ಇದು ಸಾಲದೆಂಬಂತೆ ವರ್ತಕರು ರಸ್ತೆಯ ಮೇಲೆ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. 80 ಅಡಿ ರಸ್ತೆಯಲ್ಲಿ ಎರಡು ಬದಿಯಲ್ಲಿ ವರ್ತಕರು ತಲಾ 20 ಅಡಿಗಳಷ್ಟು ರಸ್ತೆಗಳನ್ನು ಅತಿಕ್ರಮಣ ಮಾಡಿಕೊಂಡಿದ್ದರು. ದೇವಸ್ಥಾನ ಆಡಳಿತ ಮಂಡಳಿಯು ಅತಿಕ್ರಮಣ ಮಾಡಿಕೊಂಡ ವರ್ತಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಸ್ಯೆ ತಲೆದೋರಿತು.
ಸಿಎಂ ಆಗಮನ ಬಸ್ ಕೊರತೆ:ಸಿಎಂ ಸಿದ್ದರಾಮಯ್ಯ ಸೋಮವಾರ ಕೊಪ್ಪಳಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಕಾರ್ಯಕರ್ತರನ್ನು ಸಭೆಗೆ ಕರೆದುಕೊಂಡು ಬಂದು ಅವರನ್ನು ಮರಳಿ ತಮ್ಮ ಊರುಗಳಿಗೆ ಬಿಡಲು ಹೋದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಮಯಕ್ಕೆ ಸರಿಯಾಗಿ ಮರಳಿ ಬಾರದ ಹಿನ್ನೆಲೆಯಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ಹುಲಿಗಮ್ಮ ದೇವಸ್ಥಾನಕ್ಕೆ ದೂರ ದೂರದ ಊರುಗಳಿಂದ ಬರುವ ಲಕ್ಷಾಂತರ ಜನ ಭಕ್ತಾದಿಗಳು ರಸ್ತೆ ಸಾರಿಗೆ ನಿಗಮದ ಬಸ್ಸಿಗಳಿಗಾಗಿ ಕಾದು ಸುಸ್ತಾದರು. ಇದರಿಂದ ಬಸ್ ಕೊರತೆ ಕಂಡು ಬಂದಿತು. ಬಸ್ಸುಗಳು ಸಮಯಕ್ಕೆ ಬಾರದೆ ಹಿನ್ನೆಲೆಯಲ್ಲಿ ಹಾಗೂ ವಿಶೇಷ ಬಸ್ಸುಗಳ ಓಡಾಟ ರದ್ದಾದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಭಾರಿ ತೊಂದರೆಯಾಯಿತು.ಕೆಲ ಭಕ್ತರು ಸೋಮವಾರ ರಾತ್ರಿಯಿಂದಲೇ ಕೊಪ್ಪಳ,ಗಂಗಾವತಿ ಹಾಗೂ ಹೊಸಪೇಟೆ ಬಸ್ ನಿಲ್ದಾಣಕ್ಕೆ ಆಗಮಿಸಿ ಹುಲಿಗಿ ಗ್ರಾಮಕ್ಕೆ ಹೋಗುವ ಬಸ್ಸಿಗಾಗಿ ಕಾದು ಕುಳಿತರೂ ಬಸ್ಸು ಬರಲಿಲ್ಲ. ಪ್ರಯಾಣಿಕರು ರಾತ್ರಿಯಿಡಿ ನಿಲ್ದಾಣದಲ್ಲಿ ಕಳೆಯಬೇಕಾದ ಪರಿಸ್ಥಿತಿ ಬಂದಿತು.
ಲಕ್ಷ ಲಕ್ಷ ಭಕ್ತರ ಆಗಮನ: ಹುಲಿಗೆಮ್ಮ ದೇವಸ್ಥಾನಕ್ಕೆ ಅಂದಾಜು 3-4 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಆಗಮಿಸಿದ್ದರು. ಹರಕೆ ಹೊತ್ತ ಭಕ್ತರು ಹರಕೆ ತೀರಿಸಲು ಪರದಾಡಿದರು. ಹೊಳೆ ಸ್ನಾನ ಮಾಡಿಕೊಂಡು ಬರಲು ಜನ ಮುಗಿಬಿದ್ದರು.ಕಾಲ್ತುಳಿತ, ನೂಕು ನುಗ್ಗಲು:ಅದಿಕ ಭಕ್ತರಾಗಮನದಿಂದ ಭಾರಿ ಪ್ರಮಾಣದಲ್ಲಿ ನೂಕು ನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿತು. ಕಾಲ್ ತುಳಿತಕ್ಕೆ ಬಾಲಕ, ವಯೋವೃದ್ಧ ಹಾಗೂ ಮಹಿಳೆ ಸಿಕ್ಕಿ ವಿಲವಿಲ ಒದ್ದಾಡುವ ವಿಡಿಯೋ ಸಹ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಅವ್ಯವಸ್ಥೆ ಆಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಅವರೇ ಹುಲಗಿಗೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಅಕ್ಷರಶಃ ಶ್ರಮಿಸಿದರು.
ಒಂದು ಕಡೆ ಸಾರಿಗೆ ಸಂಸ್ಥೆ ಬಸ್ಸುಗಳ ಕೊರತೆಯಾದರೆ ಇನ್ನೊಂದೆಡೆ ವಾಹನ ಸಂಚಾರ ಹಾಗೂ ಭಕ್ತಾದಿಗಳ ನಿಯಂತ್ರದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿತ್ತು. ಇದು ಸೋಮವಾರ ಕೊಪ್ಪಳಕ್ಕೆ ಮುಖ್ಯಮಂತ್ರಿಗಳ ಭೇಟೆ ಎಫೆಕ್ಟ್ ಎಂದು ಹೇಳಲಾಗುತ್ತಿದೆ.ಹುಲಿಗೆಮ್ಮ ದೇವಸ್ಥಾನಕ್ಕೆ ಒಂದು ಕಡೆ ಹೆಚ್ಚುವರಿ ಬಸ್ ಓಡಿಸದೆ ಇರುವುದು ಹಾಗೂ ಟ್ರಾಫಿಕ್ ನಿರ್ವಹಣೆ ಹಾಗೂ ಭಕ್ತರ ನಿಗ್ರಹ ಮಾಡುವಲ್ಲಿ ಪೊಲೀಸರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಒದಗಿಸದಿರುವುದು ಇಂದಿನ ಗೊಂದಲಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.