ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಮದ ಅಧಿದೇವತೆ ಉಡುಸಲಮ್ಮದೇವಿ ದೇವಸ್ಥಾನದ ಉತ್ತರ ಮತ್ತು ದಕ್ಷಿಣ ದಿಕ್ಕಿನ ಗೋಪುರಗಳ ಕಳಸಾರೋಹಣ ಕಾರ‍್ಯಕ್ರಮ ಬುಧವಾರ ಅದ್ಧೂರಿಯಾಗಿ ಜರುಗಿತು.
ಕಳಸಾರೋಹಣದ ಅಂಗವಾಗಿ ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ಹೋಮ, ಹವನ, ವಿವಿಧ ಧಾರ‍್ಮಿಕ ವಿಧಿವಿಧಾನಗಳು ಜರುಗಿದವು. ಕಳಸಾರೋಹಣಕ್ಕೂ ಮೊದಲು ಪಂಚಕಳಸಗಳ ಅದ್ಧೂರಿ ಮೆರವಣಿಗೆ ಜರುಗಿತು.ಗ್ರಾಮದ ಬಾವಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಡುಸಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.
ಸುಮಂಗಳೆಯರ ೧೦೮ ಕಳಸ ಮತ್ತು ೧೦೮ ಪೂರ್ಣಕುಂಭ, ೧೦೮ ಡೊಳ್ಳು, ಸಮಾಳ, ತಾಸಿರಾಮ್, ರಾಮ್‌ಡೋಲ್ ಮತ್ತು ಮಂಗಳವಾದ್ಯಗಳು ಭಾಗವಹಿಸಿ ಮೆರವಣಿಗೆಯೆ ಮೆರುಗು ಹೆಚ್ಚಿಸಿದ್ದವು.ದಾರಿಯುದ್ದಕ್ಕೂ ನೆರೆದಿದ್ದ ಸಾವಿರಾರು ಜನರು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಸಾಗಿದ ಕಳಸಗಳ ಮೆರವಣಿಗೆಯ ಸೊಬಗು ಕಣ್ತುಂಬಿಕೊಂಡರು.
ಕಳಸಾರೋಹಣ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಜಾತಿ, ಮತ, ಪಂಥ ಮತ್ತು ಪಕ್ಷ ಮೀರಿ ಸಾವಿರಾರು ಜನರು ಸೇರಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ‍್ಮಾಣವಾಗಿತ್ತು. ಗ್ರಾಮದ ಪ್ರತಿಮನೆಯಲ್ಲಿ ಮಹಿಳೆಯರು ಉಡುತುಂಬಿಸಿಕೊಂಡು ದೇವಸ್ಥಾನಕ್ಕೆ ಭೇಟಿನೀಡಿ ದೇವಿಯ ರ‍್ಶನ ಪಡೆದು ಹೂ, ಹಣ್ಣು ಕಾಯಿ ಅರ್ಪಿಸಿ ಭಕ್ತಿ ಮೆರೆದರು.
ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಎಮ್ಮಿಗನೂರಿನ ಹಂಪಿ ಸಾವಿರ ದೇವರು ಗುರುಮಹಾಂತಿನ ಮಠದ ವಾಮದೇವಶಿವಾಚರ‍್ಯ ಶ್ರೀ ಆಶೀರ್ವಚನ ನೀಡಿ, ಬ್ರಹ್ಮ, ವಿಷ್ಣು, ಮಹೇಶ್ವರ, ಸಪ್ತಸಾಗರ, ಗಂಗೆ, ಯಮುನೆ, ಸರಸ್ವತಿ, ವಸುಂದರೆ ಸೇರಿ ಇಷ್ಟು ದೇವತೆಗಳು ಕಳದಲ್ಲಿ ನೆಲೆಸಿವೆ. ಶಿಖರ (ಗೋಪುರದ ಕಳಸ) ದರ್ಶನ ಪಡೆದರೆ ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದು ವೇದಗಳು ಹೇಳುತ್ತವೆ ಎಂದರು.
ಪೃಥ್ವಿ, ಅಗ್ನಿ, ಜಲ, ವಾಯು, ಆಕಾಶ ಪಂಚತತ್ವದ ಆಧಾರದಲ್ಲಿ ಪಂಚಲೋಹಗಳನ್ನು ಬಳಸಿ ಮಾಡಿದ ಪಂಚ ಕಳಸಗಳನ್ನು ಗೋಪುರಕ್ಕೆ ಆರೋಹಣ ಮಾಡಿದ ಬಾದನಹಟ್ಟಿಯ ಭಕ್ತರು ಹಂಪಿಯ ಗತವೈಭವ ಮರುಕಳಿಸುವಂತೆ ಮಾಡಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.ಕಲ್ಲುಕಂಭ ಗ್ರಾಮದ ರುದ್ರಮುನಿ ತಾತ, ಬಿಳೆಹಾಳು ರಾಮಯ್ಯ ತಾತ, ಕರಿಬಸವ ಶರಣ, ಶರಣೆ ಯಲ್ಲಮ್ಮ ತಾಯಿ, ಫಕ್ಕೀರಪ್ಪ ತಾತ ಮತ್ತು ಬಳ್ಳಾರಿ ಸತೀಶ್ ರೆಡ್ಡಿ , ಸಣ್ಣವೀರರೆಡ್ಡಿ, ಚಾನಳು ಶೇಖರ್ ಇದ್ದರು.