ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡಿದ ಭಕ್ತರು

| Published : Jan 16 2024, 01:49 AM IST

ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡಿದ ಭಕ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಿಂದ ಹರದಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಅಗಸ್ತ್ಯ ತೀರ್ಥ ಹೊಂಡದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಸಹಸ್ರಾರು ಜನರು ಸೋಮವಾರ ಪುಣ್ಯಸ್ನಾನ ಮಾಡಿದರು.

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದಿಂದ ಹರದಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಅಗಸ್ತ್ಯ ತೀರ್ಥ ಹೊಂಡದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಸಹಸ್ರಾರು ಜನರು ಸೋಮವಾರ ಪುಣ್ಯಸ್ನಾನ ಮಾಡಿದರು.

ಮಕರ ಸಂಕ್ರಾಂತಿಯಂದು ಸೂರ್ಯನು ತನ್ನ ಪಥ ಬದಲಾಯಿಸಿ ದಕ್ಷಿಣಾಯಣದಿಂದ ಉತ್ತರಾಯಣ ಪ್ರಯಾಣ ಮುಂದುವರಿಸುವುದರಿಂದ ಅಂದು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಹಲವೆಡೆ ಭಕ್ತರು ಪುಣ್ಯಸ್ನಾನ ಮಾಡಿದರು.ಪಟ್ಟಣದಲ್ಲಿನ ಪವಿತ್ರ ತೀರ್ಥ ಕ್ಷೇತ್ರ, ಅಗಸ್ತ್ಯ ಮಹರ್ಷಿಗಳು ಇಲ್ಲಿ ತಪಗೈದ ಪಾವನಕ್ಷೇತ್ರ ಇದಾಗಿದ್ದರಿಂದ ಇಲ್ಲಿರುವ ಅಕ್ಕ ತಂಗಿಯರ ಹೊಂಡಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹೊಂಡದಲ್ಲಿ ಮಿಂದು ಬಳಿಕ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ.

ಪ್ರತಿ ವರ್ಷ ಸಂಕ್ರಾಂತಿಯಂದು ಇಲ್ಲಿನ ಈಶ್ವರ ದೇವಾಲಯದ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿ ಸಹಭೋಜನ ಸವಿದು, ತೇರು ಎಳೆದು ಸಂಭ್ರಮಿಸುತ್ತಾರೆ.

ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿಯೂ ಮಕರ ಸಂಕ್ರಾಂತಿ ನಿಮಿತ್ತ ಸಹಸ್ರ ಸಂಖ್ಯೆಯಲ್ಲಿ ಜನರು ತ್ರಿಕೋಟಿ ಲಿಂಗಗಳ ದರ್ಶನ ಮಾಡುವುದು ಕಂಡು ಬಂದಿತು. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶಾಖಾ ಮಠವಾದ ಮುಕ್ತಿಮಂದಿರ ಕ್ಷೇತ್ರ ಜಗದ್ಗುರು ವೀರಗಂಗಾಧರ ಸ್ವಾಮಿಗಳ ತಪೋಭೂಮಿ. ಇಲ್ಲಿ ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸಬೇಕು ಎನ್ನುವ ಶ್ರೀಗಳ ಕನಸು ಈಗ ಸಾಕಾರಗೊಳ್ಳುತ್ತಿದೆ.

ಸಹಸ್ರ ಸಂಖ್ಯೆಯಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸುವ ಕಾರ್ಯವನ್ನು ಮುಕ್ತಿಮಂದಿರ ಧರ್ಮಕ್ಷೇತ್ರದ ಪೀಠಾಧಿಕಾರಿ ವಿಮಲರೇಣುಕ ವೀರ ಮುಕ್ತಿಮುನಿ ಸ್ವಾಮಿಗಳು ನಡೆಸುತ್ತಿದ್ದಾರೆ. ಭಕ್ತರನ್ನು ಸೆಳೆಯುವ ಪವಿತ್ರ ತೀರ್ಥ ಕ್ಷೇತ್ರವಾಗಿ ಮುಕ್ತಿಮಂದಿರ ಅಭಿವೃದ್ಧಿ ಹೊಂದುತ್ತಿದೆ. ಮಕರ ಸಂಕ್ರಾಂತಿ ನಿಮಿತ್ತ ಭಕ್ತರ ದಂಡು ಇಲ್ಲಿಗೂ ಹರಿದು ಬಂದಿತ್ತು.