ಕುಂದಗೋಳದ ಪಂಚಗ್ರಹ ಹಿರೇಮಠದ ಪೀಠಾಧಿಪತಿ ಶಿಥಿಕಂಠೇಶ್ವರ ಶ್ರೀಗಳು ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವುದರಲ್ಲದೇ, ಲೇಔಟ್‌ ಮಾಡುವ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮಿಯಂತಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ವೀರಶೈವ ಪರಂಪರೆಯ, ಕಾಶಿಪೀಠದ ಶಾಖಾಮಠವಾಗಿರುವ ಕುಂದಗೋಳದ ಪಂಚಗ್ರಹ ಹಿರೇಮಠ (ಶಿಥಿಕಂಠೇಶ್ವರ ಮಠ) ಇದೀಗ ಸುದ್ದಿಯಲ್ಲಿದೆ. ಮಠದ ಈಗಿನ ಪೀಠಾಧಿಪತಿ ಶಿಥಿಕಂಠೇಶ್ವರ ಶ್ರೀಗಳು ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವುದರಲ್ಲದೇ, ಲೇಔಟ್‌ ಮಾಡುವ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮಿಯಂತಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಠದ ಆಸ್ತಿ ಉಳಿಸಿ ಎಂದು ಭಕ್ತ ಸಮೂಹ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವ ಜತೆಗೆ ಮಠದ ಸಮಸ್ಯೆ ಇತ್ಯರ್ಥಪಡಿಸಿ ಎಂಬ ಕಾಶಿ ಶ್ರೀಗಳತ್ತ ಕೂಡ ಮೊರೆ ಹೋಗಿದೆ.

ಆಗಿರುವುದೇನು?

ಕಾಶಿಪೀಠದ ಶಾಖಾ ಮಠವೂ ಆಗಿರುವ ಕುಂದಗೋಳದ ಪಂಚಗ್ರಹ ಹಿರೇಮಠ 1517ರಲ್ಲಿ ಸ್ಥಾಪನೆಯಾಗಿದೆ. ವೀರಶೈವ ಪರಂಪರೆಯ ಭವ್ಯ ಮಠವಾಗಿದ್ದು ಸಿದ್ಧಾಂತ ಶಿಖಾಮಣಿ ಪ್ರತಿಪಾದಿಸುವ ಜತೆಗೆ ಪಂಚಾಚಾರ್ಯರೊಂದಿಗೆ ಭಕ್ತರ ನಂಟನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತ ಬಂದಿದೆ.

17ನೇ ಶತಮಾನದಲ್ಲಿ ಬಹುಮನಿ ಸುಲ್ತಾನರ ಕಾಲದಲ್ಲಿ ಆದಿಲ್‌ಶಾಹಿ ಆರೋಗ್ಯ ಸಮಸ್ಯೆಯಾದಾಗ ಇದೇ ಪಂಚಗ್ರಹ ಹಿರೇಮಠಕ್ಕೆ ಬಂದು ಆಗಿನ ಶಿಥಿಕಂಠೇಶ್ವರ ಶ್ರೀಗಳಿಂದ ಔಷಧಿ, ಆರೈಕೆ ಪಡೆದು ಗುಣಮುಖರಾಗಿದ್ದರಂತೆ. ಆಗ ತಮ್ಮ ಜೀವ ಕಾಪಾಡಿದ ಶಿಥಿಕಂಠೇಶ್ವರ ಮಠಕ್ಕೆ ಆದಿಲ್‌ಶಾಹಿ ನೂರಾರು ಎಕರೆ ಜಮೀನು ಇನಾಮು ಆಗಿ ನೀಡಿದ್ದಾರೆ.

ಈ ವರೆಗೆ ಮಠಕ್ಕೆ 13 ಜನ ಪಟ್ಟಾಧ್ಯಕ್ಷರಾಗಿದ್ದಾರೆ. ಈಗಿನ ಶ್ರೀಗಳು 13ನೇ ಪಟ್ಟಾಧ್ಯಕ್ಷರು. ಈ ಹಿಂದಿನ ಪಟ್ಟಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯರು ಬಹು ಪಾಂಡಿತ್ಯ ಹೊಂದಿದ್ದರಂತೆ. ಯಾವುದೇ ಹಳ್ಳಿಯಲ್ಲಿ ದೇವಸ್ಥಾನ ಸ್ಥಾಪನೆಯಾದರೂ ಆ ದೇವಸ್ಥಾನದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದರು. ಈಗಿನ ಶ್ರೀಗಳು ಸಿದ್ಧಲಿಂಗ ಶಿವಾಚಾರ್ಯರ ಸಂಬಂಧಿಕರಾಗಿದ್ದು, ಅವರ ಮನವಿ ಮೇರೆಗೆ 1997ರಲ್ಲಿ ಕಾಶಿ ಶ್ರೀ ಹಾಗೂ ರಂಭಾಪುರಿ ಶ್ರೀ ಪಟ್ಟಗಟ್ಟಿದ್ದಾರೆ. 1999ರಲ್ಲಿ ಸಿದ್ಧಲಿಂಗ ಶಿವಾಚಾರ್ಯರು ಲಿಂಗೈಕ್ಯರಾದ ಬಳಿಕ ಇವರು ಪೀಠಾಧಿಪತಿ ಆಗಿದ್ದಾರೆ.

ಈಗಿನ ಶ್ರೀಗಳು ಪಟ್ಟಕ್ಕೆ ಬಂದು 30 ವರ್ಷಗಳಾದರೂ ಧಾರ್ಮಿಕ ಕಾರ್ಯಕ್ರಮ, ಹಳ್ಳಿಯಲ್ಲಿ ದೇವಸ್ಥಾನಗಳಾದರೂ ಅಲ್ಲಿನ ಮೂರ್ತಿಯ ಪ್ರಾಣ ಪ್ರತಿಷ್ಠಾಪಿಸಿಲ್ಲ. ಹೀಗಾಗಿ ಕುಂದಗೋಳ ತಾಲೂಕಿನ ಶ್ರೀಮಠದಿಂದ ದೂರವಾಗುತ್ತಿದ್ದಾರೆಂಬ ಆರೋಪವೂ ಕೇಳಿಬಂದಿದೆ.

53 ಎಕರೆ ಲೇಔಟ್‌ ರೆಡಿ:

ಶ್ರೀಗಳು ಶ್ರೀಮಠದ ಒಂದೆರೆಡು ಎಕರೆ ಜಮೀನನ್ನು ಪಿಯು, ಡಿಗ್ರಿ ಕಾಲೇಜಿಗೆ ನೀಡಿರುವುದಕ್ಕೆ ಭಕ್ತರು ತಕರಾರು ವ್ಯಕ್ತಪಡಿಸಿಲ್ಲ. ಆದರೆ, ಧಾರವಾಡ, ಕುಂದಗೋಳದಲ್ಲಿನ ಸಾಕಷ್ಟು ಆಸ್ತಿ ಮಾರಾಟ ಮಾಡಿರುವುದು ಹಾಗೂ ಇದೀಗ 53 ಎಕರೆ ಜಮೀನನ್ನು ಬಿಲ್ಡರ್‌ ಹಾಗೂ ಡೆವಲಪರ್‌ ಅವರ ಸಹಭಾಗಿತ್ವದಲ್ಲಿ ವಸತಿ ವಿನ್ಯಾಸ (ಲೇಔಟ್‌) ಮಾಡುತ್ತಿದ್ದಾರೆ. ಈ ಮೂಲಕ ಕೋಟ್ಯಂತರ ರುಪಾಯಿ ಪಡೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಶ್ರೀಮಠಕ್ಕೆ ಆದಿಲ್‌ಶಾಹಿ ನೀಡಿರುವ ಭೂಮಿಯನ್ನು ಮಾರಾಟ ಮಾಡಲು ಬಿಡುವುದಿಲ್ಲವೆಂದು ಭಕ್ತರು ಪಣತೊಟ್ಟಿದ್ದಾರೆ.

ಆದರೆ, ಶ್ರೀಗಳು ಶ್ರೀಮಠವು ಪುತ್ರ ವರ್ಗ ಪರಂಪರೆಯ ಮಠ. ಇಲ್ಲಿ ಮಾರಾಟ ಅಥವಾ ನಿವೇಶನ ಮಾಡುವ ಅಧಿಕಾರ ತಮಗಿದೆ ಎಂದು ಹೇಳುವ ಮೂಲಕ ಭಕ್ತರಿಗೆ ಸೆಡ್ಡು ಹೊಡೆದಿದ್ದಾರೆ. ಇದು ಕಾಶಿ ಶ್ರೀಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇಂದು ಚಿಂತನ-ಮಂಥನ:

ಭಕ್ತರು ಮತ್ತು ಶ್ರೀಗಳ ನಡುವೆ ಉಂಟಾಗಿರುವ ಭಿನ್ನಮತ, ಸಮಸ್ಯೆ ಇತ್ಯರ್ಥಪಡಿಸಲು ಕಾಶಿ ಹಾಗೂ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಕುಂದಗೋಳ ಮಠದಲ್ಲೇ ಶುಕ್ರವಾರ ಚಿಂತನ-ಮಂತನ ಸಭೆ ಆಯೋಜಿಸಲಾಗಿದೆ. ಶಿಥಿಕಂಠೇಶ್ವರ ಮಠದ ಆಸ್ತಿಗಳನ್ನು ಈಗಿನ ಶ್ರೀಗಳು ಬೇಕಾಬಿಟ್ಟಿಯಾಗಿ ಮಾರಾಟ ಮಾಡಿದ್ದಾರೆ. ಇವರು ಮಠಕ್ಕೆ ಬಂದು 30 ವರ್ಷವಾದರೂ ಈ ವರೆಗೂ ಧಾರ್ಮಿಕ ಕಾರ್ಯಕ್ರಮ ನಡೆಸದ ಪರಿಣಾಮ ಮಠದ ವೈಭವ ಕಳೆದು ಹೋಗುತ್ತಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.

ಶಿವಾನಂದ ಬೆಂತೂರ, ಮಠದ ಭಕ್ತಶ್ರೀಗಳು ಭಕ್ತರನ್ನು ಕಡೆಗಣಿಸಿ ತಾವೇ ನಿರ್ಧಾರ ತೆಗೆದುಕೊಂಡು ಇದೀಗ ಜಮೀನನ್ನು ಲೇಔಟ್‌ ಮಾಡಿದ್ದಾರೆ. ಈ ಬಗ್ಗೆ ಭಕ್ತರಲ್ಲಿ ತೀವ್ರ ಅಸಮಾಧಾನವಿದ್ದು ಇದನ್ನು ನಿವಾರಿಸಲು ಶುಕ್ರವಾರ ನಡೆಯುವ ಸಭೆಗೆ ಕಾಶಿ ಶ್ರೀ ಹಾಗೂ ರಂಭಾಪುರಿ ಶ್ರೀಗಳು ಆಗಮಿಸಲಿದ್ದಾರೆ. ಅವರೇ ಭಕ್ತರೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ.

ಎಂ.ಎಸ್‌. ಅಕ್ಕಿ, ಮಾಜಿ ಶಾಸಕ, ಕುಂದಗೋಳ