ಸಾರಾಂಶ
ಭಕ್ತನು ದೇವರಲ್ಲಿ ಲೀನನಾಗಲು ಪ್ರಯತ್ನಿಸುವುದೇ ಭಕ್ತಿ. ಶಿವತತ್ತ್ವ ಚಿಂತಾಮಣಿಯ ನಾರದ ದರ್ಶನದಲ್ಲಿ ಶಿವನ ಸಭೆಯನ್ನು ಪ್ರವೇಶಿಸಿದ ನಾರದರು ಅವನನ್ನು ಸ್ತುತಿಸಲು ಆರಂಭಿಸುತ್ತಾರೆ. ಶಿವನನ್ನು ಅಚಲ ಭಕ್ತಿಯಿಂದ ಹೊಗಳುತ್ತಾರೆ. ಅಜ್ಞಾನವೆಂಬ ಅಂಧಕಾರಕ್ಕೆ ಸೂರ್ಯನಾಗಿರುವೆ. ದಕ್ಷನ ಅಹಂಕಾರವನ್ನು ಅಳಿಸಿದವನು.
ಕನ್ನಡಪ್ರಭ ವಾರ್ತೆ ಮೈಸೂರು
ಭಗವಂತನಲ್ಲಿ ಅತಿಶಯವಾದ ಪ್ರೇಮವನ್ನು ಹೊಂದುವುದೇ ಭಕ್ತಿ ಎಂದು ಡಾ.ಕೆ. ಅನಂತರಾಮು ಹೇಳಿದರು.ನಗರದ ಶ್ರೀ ಸುತ್ತೂರು ಮಠದಲ್ಲಿ ಶ್ರಾವಣ ಮಾಸದ 8ನೇ ದಿನದ ಪ್ರವಚನದಲ್ಲಿ ಅವರು ತಿಳಿಸಿದರು.
ವ್ಯಕ್ತಿಯು ತನ್ನನ್ನು ತಾನು ದೇವರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು. ಭಕ್ತನು ದೇವರಲ್ಲಿ ಲೀನನಾಗಲು ಪ್ರಯತ್ನಿಸುವುದೇ ಭಕ್ತಿ. ಶಿವತತ್ತ್ವ ಚಿಂತಾಮಣಿಯ ನಾರದ ದರ್ಶನದಲ್ಲಿ ಶಿವನ ಸಭೆಯನ್ನು ಪ್ರವೇಶಿಸಿದ ನಾರದರು ಅವನನ್ನು ಸ್ತುತಿಸಲು ಆರಂಭಿಸುತ್ತಾರೆ. ಶಿವನನ್ನು ಅಚಲ ಭಕ್ತಿಯಿಂದ ಹೊಗಳುತ್ತಾರೆ. ಅಜ್ಞಾನವೆಂಬ ಅಂಧಕಾರಕ್ಕೆ ಸೂರ್ಯನಾಗಿರುವೆ. ದಕ್ಷನ ಅಹಂಕಾರವನ್ನು ಅಳಿಸಿದವನು. ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಕಾರಣನಾದವನು. ಜಗದ್ಗುರುವಿನ ಸ್ವರೂಪ, ಉಪಮಾತೀತನು, ನಿನಗೆ ನೀನೆ ಸರ್ವಶ್ರೇಷ್ಠನಾಗಿರುವೆ. ನಿನ್ನ ಮಹಿಮೆಗಳು ಅತಿಶಯವಾದುವು. ತ್ರಿಗುಣಾತೀತ ಮತ್ತು ಅಭ್ಯುದಯನಾಗಿರುವೆ. ನಿರ್ಮಲ ನಿರಾಕಾರನಾದರು ಭಕ್ತರಿಗಾಗಿ ಸಾಕಾರರೂಪ ತಾಳಿರುವೆ. ನಿರ್ಗುಣನಾದರೂ ಗುಣವಂತನು ಮತ್ತು ಜಗತ್ತಿನ ರಕ್ಷಕನೂ ಆಗಿರುವೆ. ಅಕ್ಷಯ ಸ್ವರೂಪನು ಆಗಿರುವೆ ಎಂದು ನಾರದರು ಶಿವನನ್ನು ಕುರಿತಾಗಿ ಬಗೆಬಗೆಯಾಗಿ ಹೊಗಳಿ ಸಂತೃಪ್ತಿಗೊಳಿಸಿದರು.ಎಲ್ಲ ಬಲ್ಲವನಾಗಿದ್ದರು ಶಿವ ನಾರದರನ್ನು ಭೂಲೋಕದಿಂದ ತಂದಿರುವ ವಿಚಾರವನ್ನು ಪ್ರಸ್ತಾಪಿಸುವಂತೆ ತಿಳಿಸುತ್ತಾನೆ. ನಾರದರು ಭೂಮಿಯಲ್ಲಿ ಭಗವಂತನ ಸ್ಮರಣೆ ಮಾಡುವವರುಕಡಿಮೆಯಾಗಿದ್ದಾರೆ.ಯಾರಿಗೂ ಪಾಪಪ್ರಜ್ಞೆ ಇಲ್ಲದಂತಾಗಿದೆ. ಚಿತ್ತಚಾಂಚಲ್ಯಕ್ಕೆ ಗುರಿಯಾಗಿದ್ದಾರೆ. ರಾಜರು ಹಾಳಾಗಿದ್ದಾರೆ. ಪ್ರಜೆಗಳ ಹಿತವನ್ನು ಕಾಪಾಡುತ್ತಿಲ್ಲ. ಭಂಡಾರ ಭರ್ತಿ ಮಾಡುವ ಧನಗಾಹಿಗಳಾಗಿದ್ದಾರೆ. ಪಾಪಿಗಳಿಗೆ ಮಣೆ ಹಾಕುತ್ತಿದ್ದಾರೆ. ದೇವಾಲಯಗಳ ದಾನದತ್ತಿಗಳನ್ನು ಭಕ್ಷಿಸುತ್ತಿದ್ದಾರೆ. ದೌರ್ಜನ್ಯ ಮತ್ತು ಹಿಂಸಾಚಾರಗಳು ಹೆಚ್ಚಿ ಭೂಲೋಕ ಕೆಟ್ಟು ಹೋಗಿದೆ ಎಂದು ನಾರದರು ಶಿವನಿಗೆ ತಿಳಿಸುತ್ತಾರೆ ಎಂದು ಹೇಳಿದರು.
ಭಕ್ತಾದಿಗಳು ಹಾಗೂ ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.