ಸಾರಾಂಶ
ಅ.14ರಂದು ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಸಾವಿರಾರು ವರ್ಷಗಳ ಇತಿಹಾಸ ಇರುವ ಮಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ವಿಜಯದಶಮಿ ಅಂಗವಾಗಿ ಭಾನುವಾರ ಶ್ರದ್ಧಾ ಭಕ್ತಿಯಿಂದ ರಥೋತ್ಸವ ನೆರವೇರಿತು.ನವರಾತ್ರಿ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ,ಸರಸ್ವತಿ ವಾಗೀಶ್ವರಿ, ಮಂಗಳಾದೇವಿಯ ಅಲಂಕಾರ ಮಾಡಲಾಯಿತು. ನಿತ್ಯವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಭಾನುವಾರ ವಿದ್ಯಾರಂಭ, ತುಲಾಭಾರ, ಮಧ್ಯಾಹ್ನ 12.30ಕ್ಕೆ ರಥಾರೋಹಣ, ಸಂಜೆ 7 ಗಂಟೆಗೆ ರಥೋತ್ಸವ ನಡೆಯಿತು. ವಿದ್ಯಾರಂಭದಲ್ಲಿ ನೂರಾರು ಮಕ್ಕಳು, ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ಸಹಸ್ರಾರು ಮಂದಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.ಅ.14ರಂದು ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.