ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನ ಸಂದೇಶ ಸಾರುವಂತ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಬೆಂಗಳೂರು ಮಾರ್ಗದ ಈದ್ಗಾ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಂಘಟಿತರಾಗಿ ಸಾಮೂಹಿಕವಾಗಿ ಈದ್ ಉಲ್ ಜುಹಾ ಪ್ರಾರ್ಥನೆ ಸಲ್ಲಿಸಿದರು.ನಗರದಲ್ಲಿ ಮುಸ್ಲಿಂ ಭಾಂದವರು ಗುರುವಾರ ಬೆಳಗ್ಗೆ ಶುಭ್ರತೆಯಿಂದ ಶ್ವೇತವರ್ಣದ ಹೊಸ ಬಟ್ಟೆಗಳನ್ನು ತೊಟ್ಟು ಮಸೀದಿಯಲ್ಲಿ ನಮಾಜ್ ಸಲ್ಲಿಸಿದ ನಂತರ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಸಹಬಾಳ್ವೆಯಿಂದ ಬಾಳಬೇಕು. ಬಡವರಿಗೆ ದಾನ ಧರ್ಮ, ತ್ಯಾಗಗಳನ್ನು ಮಾಡಬೇಕು, ಪರಸ್ಪರ ಗೌರವಿಸಬೇಕು. ಸಹಕಾರ ನೀಡುವ ಮನೋಭಾವದಿಂದ ಮಾನವೀಯತೆಯನ್ನು ಎತ್ತಿಹಿಡಿಯುವಂತಾಗ ಬೇಕೆಂದು ಧರ್ಮಗುರುಗಳು ಸಂದೇಶ ಸಾರಿದರು. ಪರಸ್ಪರ ಶುಭಾಶಯ ಹಂಚಿಕೊಂಡ ಮುಸ್ಲಿಮರು ಬಡವರಿಗೆ ದಾನ ಧರ್ಮ ಮಾಡಿದರು.