ಸಾರಾಂಶ
ಸಿಂಧನೂರು ತಾಲೂಕಿನ ಗಾಂಧಿನಗರದ ಶಿವ ದೇವಾಲಯದಲ್ಲಿ ಮೂರ್ತಿಗೆ ಅಲಂಕಾರ ಮಾಡಿರುವುದು
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಗಾಂಧಿನಗರದ ಶಿವ ದೇವಾಲಯದಲ್ಲಿ ಶುಕ್ರವಾರ ಸಹಸ್ರಾರು ಜನರು ನೆರೆದು ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಬೆಳಗ್ಗೆ 8 ಗಂಟೆಗೆ ಅಷ್ಟೋತ್ತರ ಶತ ಕಳಸದಿಂದ ಗ್ರಾಮ ಪ್ರದಕ್ಷಿಣೆ, ಆಲಯ ಪ್ರದಕ್ಷಿಣೆ, ಗಣಪತಿ ಪೂಜೆ, ಪಂಚಗವ್ಯ ಪ್ರೋಕ್ಷಣೆ ಮತ್ತಿತರ ಧಾರ್ಮಿಕ ವಿಧಿ-ವಿಧಾನಗಳಿಂದ ಸಾಮೂಹಿಕ ಗರಿಕೆ ಪೂಜೆ ನೆರವೇರಿಸಲಾಯಿತು. ತ್ರಿಪುರಸುಂದರಿ ಅಮ್ಮನವರಿಗೆ ಸಾಮೂಹಿಕ ಕುಂಕುಮಾರ್ಚನೆ, ಸಂಜೆ ನೀರಾಜನ ಮಂತ್ರಪುಷ್ಪ, ಸ್ವಸ್ಥಿವಾಚನ ಕಾರ್ಯಕ್ರಮ ನಡೆಯಿತು.
ವಿವಿಧ ತಾಲೂಕಿನಿಂದ ಶಿವದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಭಾಸ್ಕರರಾವ್, ಬಿಜೆಪಿ ಮುಖಂಡ ಕೆ.ಕರಿಯಪ್ಪ ಸೇರಿದಂತೆ ಹಲವು ಗಣ್ಯರು ಪೂಜಾ ಕಾರ್ಯಕ್ರಮದಲ್ಲಿ ಇದ್ದರು.ಹಾಗೆಯೇ ಸಿಂಧನೂರು ನಗರದ ಎಪಿಎಂಸಿಯಲ್ಲಿರುವ ಗಜಾನನ ದೇವಸ್ಥಾನ, ಶ್ರೀರಾಮಮಂದಿರ, ರಾಘವೇಂದ್ರಮಠ, ಅಂಬಾದೇವಿ ದೇವಸ್ಥಾನ ಸೇರಿದಂತೆ ಪ್ರಮುಖ ಮಂದಿರಗಳಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿ ಅಂಗವಾಗಿ ಶಿವನ ಭಕ್ತರು ಉಪವಾಸ ವ್ರತ ಮಾಡಿ ಸಂಜೆ ಪೂಜೆ ಸಲ್ಲಿಸಿದರು.