ಸಾರಾಂಶ
ಮಂಡ್ಯ ನಗರದ ಶ್ರೀವಿದ್ಯಾಗಣಪತಿ ದೇವಾಲಯ, ಶ್ರೀಚಾಮುಂಡೇಶ್ವರಿ ದೇವಾಲಯ, ಶ್ರೀಮಹಾಲಕ್ಷ್ಮಿ, ಶ್ರೀಕಾಳಿಕಾಂಬ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಸಾಂಗೋಪಸಾಂಗವಾಗಿ ನೆರವೇರಿದವು. ಮಹಿಳೆಯರು, ಮಕ್ಕಳು, ಯುವತಿಯರು ಗೌರಿಗೆ ಬಾಗಿನ ಅರ್ಪಿಸಿ ಪರಸ್ಪರ ಅರಿಶಿನ-ಕುಂಕುಮ ವಿನಿಮಯ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾದ್ಯಂತ ಗೌರಿ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರ, ಪಟ್ಟಣ ಪ್ರದೇಶ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿರುವ ಶಿವಾಲಯಗಳಲ್ಲಿ ಬೆಳಗಿನಿಂದಲೇ ಪೂಜಾ ವಿಧಿ-ವಿಧಾನಗಳು ನಡೆದವು. ಬಳಿಕ ಶ್ರೀಗೌರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.ಮುಂಜಾನೆಯೇ ಮಹಿಳೆಯರು ತಮ್ಮ ತಮ್ಮ ಮನೆಗಳ ಬಾಗಿಲಲ್ಲಿ ಮೊರಗಳನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಗೌರಿ ಹಬ್ಬ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಮನೆಯಲ್ಲಿ ಗೌರಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.ಮನೆಯಲ್ಲಿ ಪೂಜೆ, ವ್ರತ ಆಚರಣೆ ಬಳಿಕ ತಮ್ಮ ಬಡಾವಣೆಗಳ ವ್ಯಾಪ್ತಿಯಲ್ಲಿ ಗೌರಿ ಮೂರ್ತಿ ಪೂಜಿಸಿ ಬಾಗಿನ ಅರ್ಪಿಸಲು ಸಿದ್ಧತೆ ಮಾಡಲಾಗಿದ್ದ ದೇವಾಲಯಗಳಿಗೆ ತೆರಳಿದ ಸುಮಂಗಲಿಯರು, ಮಕ್ಕಳು, ಯುವತಿಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಆಶೀರ್ವಾದ ಪಡೆದರು.
ನಗರದ ಶ್ರೀವಿದ್ಯಾಗಣಪತಿ ದೇವಾಲಯ, ಶ್ರೀಚಾಮುಂಡೇಶ್ವರಿ ದೇವಾಲಯ, ಶ್ರೀಮಹಾಲಕ್ಷ್ಮಿ, ಶ್ರೀಕಾಳಿಕಾಂಬ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಸಾಂಗೋಪಸಾಂಗವಾಗಿ ನೆರವೇರಿದವು. ಮಹಿಳೆಯರು, ಮಕ್ಕಳು, ಯುವತಿಯರು ಗೌರಿಗೆ ಬಾಗಿನ ಅರ್ಪಿಸಿ ಪರಸ್ಪರ ಅರಿಶಿನ-ಕುಂಕುಮ ವಿನಿಮಯ ಮಾಡಿಕೊಂಡರು.ಮಹಿಳಾ ನೌಕರರು ವಿರಳ:
ಗೌರಿ ಹಬ್ಬದ ಅಂಗವಾಗಿ ಶುಕ್ರವಾರ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ನೌಕರರ ಸಂಖ್ಯೆ ವಿರಳವಾಗಿತ್ತು. ಮಾರುಕಟ್ಟೆಘಿ, ಬಟ್ಟೆ ಅಂಗಡಿಗಳು ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಜನತೆ ಮುಗಿ ಬಿದಿದ್ದು ಕಂಡುಬಂತು.ಸರ್ಕಾರಿ ರಜೆ ಇಲ್ಲದಿದ್ದರೂ ಸಹ ಗೌರಿ ಹಬ್ಬದ ಪ್ರಯುಕ್ತ ಮಹಿಳಾ ನೌಕರರು ವೈಯುಕ್ತಿಕವಾಗಿ ರಜೆ ಹಾಕಿಕೊಂಡು ಹಬ್ಬ ಆಚರಣೆಯಲ್ಲಿ ತೊಡಗಿದ್ದರಿಂದ ಕಚೇರಿಗಳಲ್ಲಿ ಈ ನೌಕರರ ಹಾಜರಾತಿ ಕುಸಿತವಾಗಿತ್ತು. ನಾಳೆ ಗಣೇಶ ಚತುರ್ಥಿ ಇರುವುದರಿಂದ ಯುವಕರು, ಪುಟ್ಟ ಮಕ್ಕಳು ಗಣೇಶ ಮೂರ್ತಿಗಳನ್ನು ಖರೀದಿಸಿ ಹೊತ್ತೊಯ್ಯುತ್ತಿದುದು ಕಂಡುಬಂತು.