ದೇಶದಲ್ಲಿಯ ಸಹಕಾರ ತತ್ವದಡಿ ಇರುವ ಎಲ್ಲ ಕಾರ್ಖಾನೆಗಳು ಐದಾರು ಕೋಟಿಯಷ್ಟು ನಷ್ಟದಲ್ಲಿವೆ. ಆದರೆ ರಾಮದುರ್ಗದ ಧನಲಕ್ಷ್ಮೀ ಸಹಕಾರಿ ಕಾರ್ಖಾನೆ ಸಾಲಮುಕ್ತ ಮತ್ತು ಲಾಭಾಂಶದಲ್ಲಿ ನಡೆಯುತ್ತಿದೆ ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ದೇಶದಲ್ಲಿಯ ಸಹಕಾರ ತತ್ವದಡಿ ಇರುವ ಎಲ್ಲ ಕಾರ್ಖಾನೆಗಳು ಐದಾರು ಕೋಟಿಯಷ್ಟು ನಷ್ಟದಲ್ಲಿವೆ. ಆದರೆ ರಾಮದುರ್ಗದ ಧನಲಕ್ಷ್ಮೀ ಸಹಕಾರಿ ಕಾರ್ಖಾನೆ ಸಾಲಮುಕ್ತ ಮತ್ತು ಲಾಭಾಂಶದಲ್ಲಿ ನಡೆಯುತ್ತಿದೆ ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.

ಖಾನಪೇಟೆಯ ಕಾರ್ಖಾನೆ ಆವರಣದಲ್ಲಿ 2024-25ನೇ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಇಐಡಿ ಪ್ಯಾರಿ ಕಂಪನಿಗೆ ಲೀಸ್‌ ನೀಡಿರುವ ಕಾರ್ಖಾನೆ ಸಾಲಮುಕ್ತವಾಗಿದೆ. ಅಲ್ಲದೇ ಕಾರ್ಖಾನೆಯು ತನ್ನ ಷೇರುದಾರರಿಗೆ ಡಿವಿಡೆಂಟ್‌ ರೂಪದಲ್ಲಿ ರಿಯಾಯ್ತಿ ದರದಲ್ಲಿ ಸಕ್ಕರೆ ವಿತರಣೆ ಮಾಡುತ್ತಿದೆ ಎಂದು ಹೇಳಿದರು.

ಕಾರ್ಖಾನೆಯು ಸುಸಜ್ಜಿತವಾಗಿ ನಡೆಯಲು ಮತ್ತು ಲಾಭವನ್ನು ಪಡೆದುಕೊಳ್ಳುವಲ್ಲಿ ಕಾರ್ಮಿಕರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಕಾರ್ಮಿಕರಿಗೆ ಸಹಾಯಕ್ಕೆ ಒಂದು ವರ್ಷದ ಬೋನಸ್ ಘೋಷಣೆ ಮಾಡಬೇಕು. ಇನ್ನಷ್ಟು ಉತ್ಸಾಹದಿಂದ ಕೆಲಸ ನಿರ್ವಹಿಸಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಕಬ್ಬು ಕಟಾವು ವೇಳೆಯಲ್ಲಿ ಲೀಜ್‌ ಪಡೆದಿರುವ ಇಐಡಿ ಪ್ಯಾರಿ ಕಂಪನಿಯು ರೈತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಷೇರು ನೀಡಿ ಕಾರ್ಖಾನೆ ಸ್ಥಾಪನೆಗೆ ಮುಂದಾಗಿರುವ ರೈತರನ್ನು ಕಡೆಗಣಿಸಬಾರದು. ಕಬ್ಬು ಕಟಾವಿಗೆ ಕಬ್ಬಿನ ಗ್ಯಾಂಗಿನವರು ಬೇಡುವ ಲಗಾಣಿ ಹೊಂದಾಣಿಕೆಗೆ ಸಿಬ್ಬಂದಿ ಮಧ್ಯವರ್ತಿಗಳಾಗಬಾರದು ಎಂದು ತಿಳಿಸಿದರು.

ನಿರ್ದೇಶಕ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಕಾರ್ಖಾನೆಯ ಲೀಸ್‌ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ನಡೆದುಕೊಳ್ಳುತ್ತಿಲ್ಲ. ರೈತರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದೆ. ರೈತರೊಂದಿಗೆ ಅನುಚಿತ ವರ್ತನೆ ಮಾಡದೇ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಮೊದಲಿದ್ದ ಕಬ್ಬು ನುರಿಸುವ ಸಾಮರ್ಥ್ಯವನ್ನು ಇಮ್ಮಡಿಗೊಳಿಸಲಾಗಿದೆ. ಕಳೆದ ಹಂಗಾಮಿನಲ್ಲಿ ೬ ಸಾವಿರ ಮೆಟ್ರಿಕ್‌ ಟನ್ ಕಬ್ಬು ನುರಿಸಲಾಗಿದೆ. ಹಿಂದಿನಗಿಂತಲೂ ಈ ಸಾರಿ ಹೆಚ್ಚಿನ ಕಬ್ಬು ನುರಿಸುವ ಕೆಲಸ ನಡೆಯಬೇಕು. ಈ ಹಂಗಾಮಿನಲ್ಲಿ ೭ ಸಾವಿರ ಮೆಟ್ರಿಕ್‌ಟನ್‌ಕಬ್ಬು ನುರಿಸುವ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಶಾಹೀನ ಅಖ್ತಾರ ಮಾತನಾಡಿ, ಷೇರುದಾರರಿಗೆ ಸಕ್ಕರೆ ವಿತರಿಸುವ ಮೂಟೆಗಳ ಮೇಲೆ ಇಐಡಿ ಪ್ಯಾರಿ ಕಂಪನಿ ಎಂದು ಮುದ್ರಿಸಲಾಗಿದೆ. ಮುಂದಿನ ದಿನಗಳಲ್ಲಿ ಧನಲಕ್ಷ್ಮೀ ಯ ಭಾವಚಿತ್ರವನ್ನು ಮೂಟೆಗಳ ಮೇಲೆ ಮುದ್ರಿಸಲು ಕಂಪನಿ ಕ್ರಮ ವಹಿಸಬೇಕು ಎಂದರು.

ಇಐಡಿ ಪ್ಯಾರಿ ಕಂಪನಿಯ ಜನರಲ್‌ ಮ್ಯಾನೇಜರ ಶಿವಸುಂದರ್‌ಮಾತನಾಡಿ, ನಿರ್ದೇಶಕ ಮಂಡಳಿ ನಿರ್ದೇಶನದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಕ್ಕರೆ ಕಾರ್ಖಾನೆ ಸುಗಮವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಮಂಡಳಿಯ ಸದಸ್ಯರು, ಪ್ಯಾರಿ ಕಂಪನಿಯ ಎಲ್ಲ ಸಿಬ್ಬಂದಿ ಈ ವೇಳೆ ಹಾಜರಿದ್ದರು.