ಸೆ.14 ರಂದು ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಚುನಾವಣೆ

| Published : Aug 13 2025, 02:31 AM IST

ಸಾರಾಂಶ

ತಾಲೂಕಿನ ಖಾನಪೇಠದ ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 18 ನಿರ್ದೇಶಕರ ಆಯ್ಕೆಗೆ ಸೆ.14 ರಂದು ರಾಮದುರ್ಗದ ಈರಮ್ಮ ಶಿ.ಯಾದವಾಡ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ, ಬೈಲಹೊಂಗಲದ ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ತಾಲೂಕಿನ ಖಾನಪೇಠದ ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 18 ನಿರ್ದೇಶಕರ ಆಯ್ಕೆಗೆ ಸೆ.14 ರಂದು ರಾಮದುರ್ಗದ ಈರಮ್ಮ ಶಿ.ಯಾದವಾಡ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ, ಬೈಲಹೊಂಗಲದ ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಹೇಳಿದರು.

ಮಿನಿವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 19,429 ಮತದಾರರಿರುವ ಕಾರ್ಖಾನೆಗೆ 18 ಜನ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದ್ದು, ಅ ವರ್ಗದ 18,970 ಮತದಾರರು 16 ಜನ ನಿರ್ದೇಶಕರನ್ನು ಇವರಲ್ಲಿ ಸಾಮಾನ್ಯ ಕ್ಷೇತ್ರದಿಂದ 10, ಪರಿಶಿಷ್ಟ ಜಾತಿ -1, ಪರಿಶಿಷ್ಠ ಪಂಗಡ-1, ಹಿಂದುಳಿದ ಅ ವರ್ಗ-1, ಹಿಂದುಳಿದ ಬ-1, ಮಹಿಳಾ-2, ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. 58 ಸದಸ್ಯರನ್ನು ಹೊಂದಿರುವ ಬ ವರ್ಗ-(ಸಹಕಾರ ಸಂಘಗಳ ಸದಸ್ಯ) ಮತಕ್ಷೇತ್ರದಿಂದ ಓರ್ವ ಸದಸ್ಯರನ್ನು ಮತ್ತು 396 ಸದಸ್ಯರನ್ನು ಹೊಂದಿರುವ ಡ ವರ್ಗದ (ಕಬ್ಬು ಬೆಳೆಗಾರರಲ್ಲದ) ಕ್ಷೇತ್ರದಿಂದ ಓರ್ವ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.ಈ ಚುನಾವಣೆಗೆ 19429 ಮತದಾರ 400 ಮತದಾರರಿಗೆ ಒಂದರಂತೆ 50 ಮತದಾನ ಕೇಂದ್ರಗಳನ್ನು ತೆರೆಯಲಾಗುವುದು. ಮತದಾರರಿಗೆ ಕಳುಹಿಸುವ ಚುನಾವಣಾ ಸೂಚನಾ ಪತ್ರದಲ್ಲಿ ಕ್ಯೂ ಆರ್ ಕೋಡ್ ಪ್ರಕಟಿಸುವ ಮೂಲಕ ರಾಮದುರ್ಗ ಬಿಟ್ಟು ಬೇರೆ ಗ್ರಾಮಗಳ ಮತದಾನ ಕೇಂದ್ರದ ಸ್ಪಷ್ಟ ಮಾಹಿತಿ ಇರಲಿದೆ. ಸಹಾಯಕ ಚುನಾವಣಾಧಿಕಾರಿಯಾಗಿ ರಾಮದುರ್ಗ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಕಾರ್ಯನಿರ್ವಹಿಸುವರು ಎಂದರು.ಆ.29 ರಂದು ಬೆಳಗ್ಗೆ 11 ಗಂಟೆಗೆ ಅರ್ಹ ಮತದಾರರ ಯಾದಿಯನ್ನು ಕಾರ್ಖಾನೆಯ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಆ.30 ರಿಂದ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣೆಯಲ್ಲಿ ಉಮೇದುವಾರರಾಗಿ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸುವುದು ಪ್ರಾರಂಭವಾಗುವುದು. ಸೆ.9 ರಂದು ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣೆಗೆ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಸೆ. 7 ರಂದು 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಂತರ ಅರ್ಹ ಉಮೇದುವಾರರ ಯಾದಿ ಪ್ರಕಟಿಸಲಾಗುವುದು. ಸೆ.8 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಮಧ್ಯಾಹ್ನ 3 ಗಂಟೆ ನಂತರ ನಾಮಪತ್ರಗಳ ಅಂತಿಮವಾಗಿ ಕಣದಲ್ಲಿ ಉಳಿಯುವ ಅರ್ಹ ಉಮೇದುವಾರರ ಯಾದಿ ಪ್ರಕಟ, ಅವಶ್ಯವಿದ್ದಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡುವುದು. ಸೆ.10 ಮಧ್ಯಾಹ್ನ 12 ಗಂಟೆ ನಂತರ ಹಂಚಿಕೆ ಮಾಡಲಾದ ಚಿಹ್ನೆಯೊಂದಿಗೆ ಮಾದರಿ ಮತಪತ್ರ ಪ್ರಕಟಿಸುವುದು. ಸೆ.14 ರಂದು ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಈರಮ್ಮ ಶಿ.ಯಾದವಾಡ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಚುನಾವಣೆ ನಡೆಯಲಿದೆ. ನಂತರ ಮತಗಳ ಏಣಿಕೆಯ ನಂತರ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಗ್ರೇಡ್-2 ತಹಸೀಲ್ದಾರ್‌ ಸಂಜಯ ಖಾತೆದಾರ ಇದ್ದರು.