ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿದಾನಗಳಲ್ಲಿ ಅನ್ನದಾನ ಶ್ರೇಷ್ಠ ಎಂದು ಬಣ್ಣಿಸಲ್ಪಟ್ಟಿದೆ. ಮಠ ಮಂದಿರಗಳಲ್ಲಿ ಇಂಥ ಅನ್ನ ದಾಸೋಹ ನಡೆಯುತ್ತಿವೆ. ಆದರೆ, ಇಲ್ಲಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಬರೀ 5 ರುಪಾಯಿಯಲ್ಲಿ ಬುತ್ತಿ ಹೆಸರಿನಲ್ಲಿ ಮಧ್ಯಾಹ್ನದ ಊಟ ಲಭಿಸುತ್ತಿದ್ದು, ರೋಗಿಗಳ ಉಪಚಾರಕರು ರಿಯಾಯಿತಿ ಊಟದ ಸೇವೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಪತ್ರೆ ಆವರಣದಲ್ಲಿರುವ ಇನ್ಫೋಸಿಸ್ ಧರ್ಮಶಾಲೆಯಲ್ಲಿ 2023ರ ಜ. 26ರಂದು ಸೇವಾ ಭಾರತಿ ಟ್ರಸ್ಟ್‌ನವರು ಅದಮ್ಯ ಚೇತನ ಟ್ರಸ್ಟ್ ಸಹಯೋಗದಲ್ಲಿ ಬುತ್ತಿ ಸೇವೆಯಡಿ ನಿತ್ಯ ನೂರಾರು ಜನರಿಗೆ ಊಟ ನೀಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ವಿವಿಧ ತಾಲೂಕು, ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ ಜಿಲ್ಲೆಯ ನಾನಾ ತಾಲೂಕುಗಳಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೀಗೆ ಚಿಕಿತ್ಸೆ ವೇಳೆ ವಾರ, ತಿಂಗಳುಗಟ್ಟಲೇ ರೋಗಿಗಳ ಜತೆ ಇರುವ ಉಪಚಾರಕರಿಗೆ ಈ ಊಟ ಆಸರೆಯಾಗಿದೆ.ಪಂಕ್ತಿ ಭೋಜನ
ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಊಟ ಆರಂಭವಾಗಲಿದ್ದು, ಕೂಪನ್ ಪಡೆದವರಿಗೆ ಸರದಿ ಸಾಲಿನಲ್ಲಿ ತಟ್ಟೆಯಲ್ಲಿ ಊಟ ನೀಡಲಾಗುತ್ತದೆ. ಹೀಗೆ ಊಟ ಪಡೆದವರು ಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ. ಮೊದಲ ಪಂಕ್ತಿ ವೇಳೆ ಕಡ್ಡಾಯವಾಗಿ ಪ್ರಾರ್ಥನೆ ಮಾಡಿಸುತ್ತಾರೆ. ದಿನವೊಂದಕ್ಕೆ 120ರಿಂದ 150 ಜನ ಊಟ ಸವಿಯುತ್ತಾರೆ. ಎರಡು ಚಪಾತಿ, ಪಲ್ಯ ಹಾಗೂ ಅನ್ನ, ಸಾಂಬಾರನ್ನು ಬರೀ ಐದು ರುಪಾಯಿಯಲ್ಲಿ ನೀಡಲಾಗುತ್ತಿದೆ. ಬುಧವಾರ ಮಾತ್ರ ಬಿಸಿಬೇಳೆ ಬಾತ್, ಪಲಾವ್ ಹಾಗೂ ಶನಿವಾರ ಉಪ್ಪಿಟ್ಟು ಹಾಗೂ ಕೇಸರಿ ಬಾತ್ ಇಲ್ಲವೇ ಪಲಾವ್ ನೀಡಲಾಗುತ್ತದೆ. ಇದರ ಜತೆಯಲ್ಲಿ ಚಪಾತಿ, ಪಲ್ಯ ಇದ್ದೇ ಇರುತ್ತದೆ. ಹೀಗೆ ಊಟ ಮುಗಿಸಿದ ಬಳಿಕ ಕುಡಿಯಲು ಶುದ್ಧ ನೀರು ನೀಡಲಾಗುತ್ತದೆ.ಅದಮ್ಯ ಚೇತನ ಟ್ರಸ್ಟ್‌ನಿಂದ ಅನ್ನ, ಸಾಂಬಾರ ಬರುತ್ತದೆ. ಅಕ್ಟೋಬರ್, ಬೇಸಿಗೆ ರಜೆ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲಿ ಮಾತ್ರ ಅಲ್ಲೇ ಅನ್ನ, ಸಾಂಬಾರ ತಯಾರಿಸುತ್ತಾರೆ. ಸೇವಾ ಭಾರತಿ ಟ್ರಸ್ಟ್‌ನಿಂದ ಚಪಾತಿ, ಪಲ್ಯ ನೀಡುತ್ತಾರೆ. ಇದಕ್ಕಾಗಿ ಟ್ರಸ್ಟ್ ನಾಲ್ಕು ಜನ ಸಿಬ್ಬಂದಿ ನೇಮಿಸಿದ್ದು, ಅವರ ವೇತನ ಸೇರಿದಂತೆ ಸಾಮಗ್ರಿ ಖರೀದಿಗಾಗಿ ದಿನಕ್ಕೆ 4500ರಿಂದ 5 ಸಾವಿರ ರು. ಖರ್ಚು ಮಾಡುತ್ತದೆ.
ದಾನಿಗಳಿಂದಲೂ ಅಡುಗೆಗೆ ಬೇಕಾದ ಅಕ್ಕಿ ಪ್ಯಾಕೆಟ್ ಸೇರಿದಂತೆ ಸಾಮಗ್ರಿಗಳನ್ನು ಟ್ರಸ್ಟ್‌ನವರು ಸ್ವೀಕರಿಸುತ್ತಾರೆ. ಹೀಗೆ ನೀಡಿದ ಅಕ್ಕಿಯನ್ನು ರಜಾ ದಿನಗಳಲ್ಲಿ ಅನ್ನ ತಯಾರಿಸಲಾಗುತ್ತದೆ. ವಿಶೇಷವಾಗಿ ಜನ್ಮದಿನ ಸಂದರ್ಭದಲ್ಲಿ ದಾನಿಗಳು ಆಯಾ ದಿನದ ಖರ್ಚು ನೀಡಿ ಊಟದ ವ್ಯವಸ್ಥೆ ಮಾಡಿಸುತ್ತಾರೆ.ಅನ್ನವೇ ದೇವರು
ಅನ್ನವಿದ್ದರೆ ಪ್ರಾಣ, ಪ್ರಾಣವಿದ್ದರೆ ಪರಾಕ್ರಮ, ಅನ್ನವನ್ನು ಬೇಕಾದಷ್ಟು ಮಾತ್ರ ಬಡಿಸಿಕೊಂಡು ಊಟ ಮಾಡಬೇಕು, ಆಹಾರವನ್ನು ಪೋಲು ಮಾಡಬೇಡಿ, ಅನ್ನವನ್ನು ಬಡಿಸಿಕೊಂಡು ತಟ್ಟೆಯಲಿ ಹಾಗೇ ಬಿಟ್ಟು ಹೋದರೆ ಬೇರೆಯವರ ಅನ್ನವನ್ನು ಕದ್ದಂತೆ. ಹೀಗೆ ಧರ್ಮಶಾಲೆಯ ಆವರಣದಲ್ಲಿ ಬರೆದಿರುವ ಸಾಲುಗಳು ಊಟಕ್ಕೆ ತೆರಳಿದವರಲ್ಲಿ ಅನ್ನದ ಮಹತ್ವ ತಿಳಿಸುತ್ತವೆ.ಕುಟುಂಬ ಸದಸ್ಯರು ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿದಾಗ ಅವರ ಉಪಚಾರಕ್ಕೆ ಎರಡ್ಮೂರು ಸಲ ಬಂದಿದ್ದೇನೆ. ಹೀಗೆ ಆಸ್ಪತ್ರೆಯಲ್ಲಿ ಉಳಿದುಕೊಂಡಾಗ ಧರ್ಮಶಾಲೆಯಲ್ಲಿ 5 ರು. ಊಟ ಸ್ವೀಕರಿಸಿದ್ದು, ಸೇವಾ ಭಾರತಿ ಟ್ರಸ್ಟ್ ಹಾಗೂ ಅದಮ್ಯ ಚೇತನ ಟ್ರಸ್ಟ್‌ನ ಅನ್ನದಾನ ಸೇವೆಗೆ ಎಷ್ಟು ಕೊಂಡಾಡಿದರೂ ಸಾಲದು ಗದಗ ತಾಲೂಕಿನ ಅಸುಂಡಿಯ ಶಿವಲೀಲಾ ಗದಗಿನ ಹೇಳಿದರು.
ಧರ್ಮಶಾಲೆಯಲ್ಲಿ ಊಟ ಮಾಡಿದವರು ತೃಪ್ತ ಭಾವನೆ ವ್ಯಕ್ತಪಡಿಸುತ್ತಾರೆ. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೋಗಿಗಳ ಉಪಚಾರಕರು ಮಧ್ಯಾಹ್ನದ ಕಡಿಮೆ ದರದ ಊಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿ ಕೆಲಸ ಮಾಡುತ್ತಿರುವ ನಮಗೂ ಖುಷಿಯಾಗುತ್ತಿದೆ ಎಂದು ಬುತ್ತಿ ಊಟದ ವ್ಯವಸ್ಥಾಪಕ ಮಂಜುನಾಥ ಹೇಳಿದರು.