ಕುಟುಂಬದಲ್ಲಿ ಹೆಣ್ಣು ಮಕ್ಕಳು ಜಾಗೃತರಾದರೆ ಇಡೀ ಕುಟುಂಬವೇ ಜಾಗೃತರಾಗುತ್ತಾರೆ. ಶ್ರೀಕ್ಷೇತ್ರದ ಸಂಸ್ಥೆ ಅಸ್ಥಿತ್ವಕ್ಕೆ ಬಂದ ಬಳಿಕ ಗ್ರಾಮೀಣ ಹೆಣ್ಣುಮಕ್ಕಳು ಆರ್ಥಿಕವಾಗಿ ಸದೃಢರಾಗಿದ್ದಾರೆ. ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಂಡು ಹೊಸ ಬದುಕು ಕಟ್ಟಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಜೊತೆಗೆ ಜಾಗೃತರನ್ನಾಗಿ ಮಾಡುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದ ಶ್ರೀರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಸಾಮೂಹಿಕ ಗಣಹೋಮ, ಶಿವಹೋಮ, ಶಿವಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಟುಂಬದಲ್ಲಿ ಹೆಣ್ಣು ಮಕ್ಕಳು ಜಾಗೃತರಾದರೆ ಇಡೀ ಕುಟುಂಬವೇ ಜಾಗೃತರಾಗುತ್ತಾರೆ. ಶ್ರೀಕ್ಷೇತ್ರದ ಸಂಸ್ಥೆ ಅಸ್ಥಿತ್ವಕ್ಕೆ ಬಂದ ಬಳಿಕ ಗ್ರಾಮೀಣ ಹೆಣ್ಣುಮಕ್ಕಳು ಆರ್ಥಿಕವಾಗಿ ಸದೃಢರಾಗಿದ್ದಾರೆ. ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಂಡು ಹೊಸ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಧರ್ಮಸ್ಥಳ ಸಂಸ್ಥೆಯು ಹೆಣ್ಣುಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಗೂ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿ ಅವರಿಗೆ ಚಿನ್ನದ ಬಹುಮಾನ ನೀಡುವ ಕೆಲಸ ಮಾಡಬೇಕು. ಈ ಕಾರ್ಯಕ್ರಮಕ್ಕೆ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಚಿನಕುರಳಿ ಗ್ರಾಮದ ನಾಗಮ್ಮ ಲೇ.ನಿಂಗರಾಜುರ ಪುತ್ರ ಸಿ.ಎನ್.ಅಭಿಷೇಕ್ ಅವರು ಮೈಸೂರು ವಿವಿಯಲ್ಲಿ 7 ಚಿನ್ನದ ಪದಕ ಪಡೆದು ನಮ್ಮೂರಿಗೆ ಕೀರ್ತಿ ತಂದಿದ್ದಾರೆ. ಗ್ರಾಮದ ಪರ ಅಭಿನಂದಿಸುತ್ತೇನೆ. ಆತನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಎಸ್‌ಟಿಜಿ ಶಿಕ್ಷಣ ಸಂಸ್ಥೆಯಿಂದ ಉಚಿತ ಲ್ಯಾಪ್‌ಟಾಪ್ ನೀಡಿದ್ದೇವೆ. ಜೊತೆಗೆ ವಿದ್ಯಾರ್ಥಿ ಐಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದು, ಇದಕ್ಕೆ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತರಾವ್, ಯೋಜನಾಧಿಕಾರಿ ಯಶವಂತ್ ಮಾತನಾಡಿದರು. ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. 7 ಚಿನ್ನದ ಪದಕ ಪಡೆದ ಸಿ.ಎನ್.ಅಭಿಷೇಕ್ ರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿ.ಎ.ಲೋಕೇಶ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಎಚ್.ಸಿ.ಧನಂಜಯ್, ಶಾಂತಲ ರಾಮಕೃಷ್ಣೇಗೌಡ, ಎಚ್.ಆರ್.ಧನ್ಯಕುಮಾರ್, ಸಿ.ಡಿ.ಮಹದೇವು ಸೇರಿದಂತೆ ಹಲವರು ಇದ್ದರು.