ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಗ್ರಾಮಾಂತರ ಶಾಸಕಿ ಶಾರಸದ ಪೂರ್ಯಾನಾಯ್ಕ್ ಹೇಳಿದರು.ಸಮೀಪದ ಆಗರದಹಳ್ಳಿಯಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೈಮರ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ಸಾಮೂಹಿಕ ಶಿವ ಪಾರ್ವತಿ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರ ಮಾಡುವಷ್ಟು ಸೇವಾ ಕಾರ್ಯಗಳನ್ನು ಶ್ರೀ ಕ್ಷೇತ್ರದ ಯೋಜನೆ ಮಾಡುತ್ತಿದೆ. ಕ್ಷೇತ್ರದ ಮೇಲಿನ ಪ್ರೀತಿ ಹಾಗೂ ಭಕ್ತಿ ಪೂರ್ವಕ ಭಾವನೆಗಳು ಯೋಜನೆಯ ಯಶಸ್ವಿಗೆ ಕಾರಣವಾಗಿವೆ. ಗ್ರಾಮಾಭಿವೃದ್ಧಿ ಸಂಸ್ಥೆ ಹಣಕಾಸಿ ವ್ಯವಹಾರದೊಂದಿಗೆ ದಾರ್ಮಿಕ ಕಾರ್ಯಗಳಿಗೆ ಒತ್ತು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಂಘದ ಹೆಣ್ಣು ಮಕ್ಕಳನ್ನು ಕಂಡು ಮೊದಲು ಮೂದಲಿಸುತ್ತಿದ್ದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು ಮಾತನಾಡಿ, ಮಹಿಳೆಯರಿಗೆ ಆರ್ಥಿಕ ಶಕ್ತಿ ಮತ್ತು ಕುಟುಂಬ ನಿರ್ವಹಣೆಯ ಜಾಣ್ಮೆಯನ್ನು ರೂಪಿಸುವ ಕಾರ್ಯವನ್ನು ಸಂಸ್ಥೆಯು ಕಳೆದ 20 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ ಎಂದರು.
ಯೋಜನೆಯ ಲಾಭಗಳನ್ನು ಸದ್ಭಳಕೆ ಮಾಡಿಕೊಂಡ ಹಲವು ಮಹಿಳೆಯರು ಆರ್ಥಿಕವಾಗಿ ಸದೃಡರಾಗುತ್ತಿದ್ದಾರೆ. ಕ್ಷೇತ್ರದ ಸೇವಾ ಚಟುವಟಿಗಳ ವಿಸ್ತಾರಗೊಳ್ಳುತ್ತಿರುವುದು ಸಾಮಾಜಿಕ ಪ್ರಗತಿಗೆ ಸಹಕಾರಿ. ಮಹಿಳೆಯರ ಆರ್ಥಿಕ ಸಭಲತೆಗೆ ಯೋಜನೆ ಭದ್ರ ಬುನಾದಿಯಾಗಿದೆ. ಯೋಜನೆಯಲ್ಲಿ ಪಡೆದ ಸಾಲವನ್ನು ಉದ್ಧೇಶಿತ ಕಾರ್ಯಗಳಿಗೆ ಬಳಸಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದು ಹೇಳಿದರು.ಯೋಜನಾಧಿಕಾರಿ ಅಜಯ್ ಮಾತನಾಡಿ ತಾಲೂಕಿನಲ್ಲಿ 4,250 ಸ್ವ ಸಹಾಯ ಸಂಘಗಳಲ್ಲಿ 37,500 ಜನ ಸದಸ್ಯರಿದ್ದಾರೆ. 106 ಜನರಿಗೆ ಮಾಶಾಸನ ನೀಡಲಾಗುತ್ತಿದೆ. ವಲಯ ವ್ಯಾಪ್ತಿಯ 7 ದೇವಸ್ಥಾನದ ಜೀರ್ಣೋದ್ದಾರಕ್ಕೆ 8 ಲಕ್ಷ ದೇಣಿಗೆ ನೀಡಲಾಗಿದೆ. ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಬೆಳೆಯಬೇಕು. ಕ್ಷೇತ್ರದ ಅಧ್ಯಯನ ಪ್ರವಾಸಗಳು ರೈತಾಪಿಗಳ ಪಾಲಿಗೆ ಸಂಜೀವಿನಿಯಾಗಿದೆ. ಕುಟುಂಬಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸದಸ್ಯರು ಯೋಜನೆಯ ಲಾಭಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾಲಂಬಿಗಳಾಗಬೇಕು ಎಂದರು.
ಈ ವೇಳೆ ಮಾಜಿ ಎಪಿಎಂಸಿ ಸದಸ್ಯ ಎಂ.ಎಸ್.ಚಂದ್ರಶೇಖರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಮಾಜಿ ಎಪಿಎಂಸಿ ಅಧ್ಯಕ್ಷ ಚಂದ್ರಪ್ಪ, ಒಕ್ಕೂಟಗಳ ಅಧ್ಯಕ್ಷೆ ರತ್ನಮ್ಮ, ಯೋಜನಾಧಿಕಾರಿ ಪ್ರಕಾಶ್, ಜಿಲ್ಲಾ ಜನ ಜಾಗೃತಿ ಉಪಾಧ್ಯಕ್ಷ ಎಂ.ಪಾಲಾಕ್ಷಪ್ಪ, ಸುಲೋಚನ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಮೇಲ್ವಿಚಾರಕ ಮಂಜುನಾಥ್, ಅಜಯ್, ಅನಿತಾಕುಮಾರ್, ಸನ್ನಿಧಿ ಸೇರಿದಂತೆ ಇತರರಿದ್ದರು.