ಮಾರ್ಚ್ ತಿಂಗಳಲ್ಲಿ ನಡೆಯುವ ರಾಜ್ಯ ಬಜೆಟ್‌ನಲ್ಲಿ ವಿಜಯಪುರದಲ್ಲಿ ಸರ್ಕಾರದ ವತಿಯಿಂದ ಸ್ಥಾಪಿಸಲು ಉದ್ದೇಶಿಸಿದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಜೆಟ್ ಕೋರುವ ಒಂದು ದಿನ ಧರಣಿಯನ್ನು ಮಾರ್ಚ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲು ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸುಧೀರಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾರ್ಚ್ ತಿಂಗಳಲ್ಲಿ ನಡೆಯುವ ರಾಜ್ಯ ಬಜೆಟ್‌ನಲ್ಲಿ ವಿಜಯಪುರದಲ್ಲಿ ಸರ್ಕಾರದ ವತಿಯಿಂದ ಸ್ಥಾಪಿಸಲು ಉದ್ದೇಶಿಸಿದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಜೆಟ್ ಕೋರುವ ಒಂದು ದಿನ ಧರಣಿಯನ್ನು ಮಾರ್ಚ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲು ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸುಧೀರಕುಮಾರ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರ ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಹಿಂದೆ ಹೊರಡಿಸಿದ ಸುತ್ತೋಲೆಯನ್ನು ಮಾರ್ಪಾಡನ್ನು ಕಾನೂನು ತಿದ್ದುಪಡೆ ಮಾಡುವ ಮೂಲಕ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಸುಗ್ರೀವಾಜ್ಞೆ ಹೊರಡಿಸುವುದು, ಬೆಳೆ ಹಾನಿಯಾದ ಸಂದರ್ಭದಲ್ಲಿ ಫಸಲ್‌ ಭಿಮಾ ಯೋಜನೆಯಡಿಯಲ್ಲಿ ರೈತರು ಕಟ್ಟಿದ ಕಂತಿಗೆ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಬಿಡುಗಡೆ ಗೊಳಿಸುವುದು, ಕೊಳವೆ ಭಾವಿ ಕೊರೆಯಿಸಿದ ರೈತರಿಗೆ ಯಾವುದೇ ಮಾನದಂಡವಿಲ್ಲದೇ ಸಂಪೂರ್ಣ ಉಚಿತವಾಗಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ವಾಯರ್‌ಗಳನ್ನು ಒದಗಿಸುವುದು, ಲಾಲ್‌ಬಹಾದ್ಧೂರ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನೀರು ನಿಲ್ಲಿಸಲು ಗೇಟ್ ಅಳವಡಿಸುವುದು ಹಾಗೂ ಅದಕ್ಕೆ ತಗುಲುವ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಂಘದ ಗೌರವ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಮಾತನಾಡಿ, ಬಜೆಟ್ ಮುಂಚೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಇದೇ ತಿಂಗಳಲ್ಲಿ ಸಭೆ ಸೇರಿ ಮಾರ್ಚ್ ಕೊನೆಯ ವಾರದಲ್ಲಿ ಧರಣಿ ಕುರಿತು ನಿರ್ಧರಿಸಿ ದಿನಾಂಕ ನಿಗದಿ ಪಡಿಸಲಾಗುವುದು. ಕಾರಣ ಧರಣಿಗೆ ರಾಜ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನಿಗದಿ ಪಡಿಸುವ ದಿನಾಂಕದಂದು ಬೆಂಗಳೂರಿಗೆ ಆಗಮಿಸಿ ಧರಣಿಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು. ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಿಂಗಮ್ಮ ಶಾಂತಮ್ಮ, ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷ ಪ್ರಕಾಶ ಬರ‍್ಕಿ ಮಾತನಾಡಿದರು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬೆಳಗಾವಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹುಂಬಿ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ಉಮೇಶ ವಾಲಿಕಾರ, ಗುರುಲಿಂಗಪ್ಪ ಪಡಸಲಗಿ, ಬಸವರಾಜ ಹನ್ನಿಕೇರಿ. ಜಯಶ್ರೀ ಜಂಗಮಶೆಟ್ಟಿ, ಜಂಪಣ್ಣ ಪರಶುರಾಮಪೂರ, ಮಲ್ಲಪ್ಪ ಪಡಸಲಗಿ, ದಾವಲಸಾಬ ನಧಾಫ್, ಲಾಲಸಾಬ್‌ ಹಳ್ಳೂರ, ಹೊನಕೇರಪ್ಪ ತೆಲಗಿ, ಶ್ರೀನಿವಾಸ ಗೊಟಗುಣಕಿ, ಕರೆಪ್ಪ ಆಳೂರ, ಎಚ್.ಪ್ರಕಾಶ ಚಳ್ಳಕೇರೆ, ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಇದ್ದರು.ರೈತರ ಪ್ರತಿಯೊಂದು ಸಮಸ್ಯೆಗಳಿಗೆ ಹೋರಾಟವೇ ಅನಿವಾರ್ಯವಾಗಿದೆ. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪರವನ್ನು ರೈತರ ಸಂಕಷ್ಟಗಳನ್ನು ಅರಿಯದೇ ಮೋಜು ಮಸ್ತಿಯಲ್ಲಿ ನಿರತರಾಗಿದ್ದಾರೆ. ಇಂತಹವರಿಗೆ ಸಂಘಟನೆಯ ಮೂಲಕ ಮುಂಬರುವ ಸಮಾಜದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ.

-ಕೆ.ಎಸ್.ಸುಧೀರಕುಮಾರ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷರು.