ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರಿ ನಾಲಾ ಏರಿ, ರಸ್ತೆ ದುರಸ್ತಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಹಲವಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ಧೋರಣೆ ಖಂಡಿಸಿ ದಸರಗುಪ್ಪೆ ಗ್ರಾಮದ ರೈತ ಡಿ.ಪ್ರಭಾಕರ್ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.ಪಟ್ಟಣದ ತಾಲೂಕು ಕಚೇರಿ ಎದುರು ಸತ್ಯಾಗ್ರಹ ಧರಣಿ ಆರಂಭಿಸಿರುವ ಅವರು, ತಾಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿಯ ಕಿರಂಗೂರು ಗ್ರಾಮದ ಸರ್ವೇ ನಂ. 1078/1ರಿಂದ 1078/4 ಹಾಗೂ 1073/1ಬಿ2 ತನಕ ಇರುವ ನಾಲಾ ಏರಿ ಹಾಗೂ ರಸ್ತೆ ಖರಾಬು ನಾಲಾ ಹಾಗೂ ರಸ್ತೆಯ ಮಧ್ಯದಲ್ಲಿನ (ಮಂಟಪದ ಪಕ್ಕ) ಒತ್ತುವರಿ ರಸ್ತೆ ತೆರವು ಮಾಡಿ ಸಾರ್ವಜನಿಕ ರಸ್ತೆಯನ್ನಾಗಿ ಕಲ್ಪಿಸುವಂತೆ 2004 ರಿಂದ ತಾಲೂಕು ಆಡಳಿತಕ್ಕೆ ದೂರು ನೀಡಿ ಮನವಿ ಮಾಡಿದ್ದರು.
ಕಳೆದ 21 ವರ್ಷಗಳಿಂದ ಸಾರ್ವಜನಿಕವಾಗಿ ರೈತರುಗಳ ಜಮೀನುಗಳಿಗೆ ತೆರಳುವ ರಸ್ತೆ ಅಗಲೀಕರಣ ಮಾಡದೆ ಇರುವ ಅಧಿಕಾರಿಗಳ ವಿರುದ್ಧ ಸತ್ಯಾಸತ್ಯತೆಯ ಬಗ್ಗೆ ನ್ಯಾಯಾಲಯದಲ್ಲಿ ಉನ್ನತ ಮಟ್ಟದ ತನಿಖೆಗೆ ಕೋರಿ ರೈತ ಪ್ರಭಾಕರ್ 3ನೇ ಬಾರಿಗೆ ಸತ್ಯಾಗ್ರಹ ನಡೆಸುತ್ತಿದ್ದಾರೆ.ರೈತ ಡಿ.ಪ್ರಭಾಕರ್ ಮಾತನಾಡಿ, ರಸ್ತೆ ಒತ್ತುವರಿ ಹಾಗೂ ನಾಲಾ ಏರಿ ದುರಸ್ತಿಗಾಗಿ 2004ನೇ ಸಾಲಿನಿಂದ 2025ನೇ ಸಾಲಿನವರೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದೇನೆ. ಅಧಿಕಾರಿಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದು ದುರಾದೃಷ್ಟಕರ ಎಂದು ದೂರಿದರು.
ನನ್ನ ಮೇಲೆ ಪ್ರಭಾವಿಗಳು ಸಹ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಠಾಣೆಗೆ ದೂರು ದಾಖಲಿಸಿದ್ದರೂ ಸಹ ಪೊಲೀಸರು ಪ್ರಭಾವಿಗಳು ಎಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಇದೀಗ ರಸ್ತೆ ಅಗಲೀಕರಣಕ್ಕೆ ಶಾಸಕರು ಗುದ್ದಲಿ ಪೂಜೆ ನಡೆಸಿದ್ದಾರೆ. ಆದರೆ, ಪ್ರಭಾವಿಗಳ ಒತ್ತಡದಿಂದ ಅಧಿಕಾರಿಗಳು ಕಾಮಗಾರಿ ಇನ್ನು ಆರಂಭಿಸಿಲ್ಲ ಎಂದು ಆರೋಪಿಸಿದರು.ಈಗಾಗಲೇ ಇದೇ ವಿಷಯವಾಗಿ ಎರಡು ಬಾರಿ ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಉನ್ನತ ಮಟ್ಟದ ತನಿಖೆಗೆ ಕೋರಿ ಸೋಮವಾರದಿಂದ ತಾಲೂಕು ಕಚೇರಿ ಎದುರು ಧರಣಿ ಕುಳಿತು 3ನೇ ಬಾರಿಗೆ ದಾಖಲೆ ಪತ್ರಗಳ ಹಿಡಿದು ಸತ್ಯಾಗ್ರಹ ನಡೆಸುತ್ತಿದ್ದೇನೆ. ಕೂಡಲೇ ಸ್ಥಳೀಯ ತಾಲೂಕು ಆಡಳಿತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.