ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಗಾಂಧಿಚೌಕದಲ್ಲಿ ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿಯವರಿಂದ ಕುತುಬುದ್ದೀನ್ ಖಾಜಿಯವರ ನೇತೃತ್ವದಲ್ಲಿ ಸವದತ್ತಿ ಯಲ್ಲಮ್ಮಾ ರೈಲ್ವೆ ಮಾರ್ಗಕ್ಕಾಗಿ ಹಮ್ಮಿಕೊಂಡ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದ್ದು, ಶಾಸಕ ವಿಶ್ವಾಸ ವೈದ್ಯರವರು ಧರಣಿ ಸ್ಥಳಕ್ಕೆ ಆಗಮಿಸಿ ರೈಲು ಮಾರ್ಗ ನಿರ್ಮಾಣದ ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಶುಕ್ರವಾರ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗಿದೆ.ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಇಲ್ಲಿಯವರೆಗೆ ರೈಲು ಮಾರ್ಗದ ನಿರ್ಮಾಣದ ಕಿಚ್ಚು ಈ ಭಾಗದಲ್ಲಿರಲಿಲ್ಲ. ಖಾಜಿಯವರು ಆಗಮಿಸಿ ಈ ಹೋರಾಟದ ರೂಪರೇಷೆಯನ್ನು ಕೈಗೊಂಡ ನಂತರ ಜನರಲ್ಲಿ ರೈಲು ಮಾರ್ಗ ನಿರ್ಮಾಣದ ಆಶಾಭಾವನೆಗಳು ಮೂಡುತ್ತಿರುವುದು ಸಂತಸದ ವಿಷಯ ಎಂದರು.
ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ರೈಲು ಮಾರ್ಗ ನಿರ್ಮಾಣದ ವಿಷಯದಲ್ಲಿ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಪ್ರಮುಖವಾಗಿದ್ದು, ಕೇಂದ್ರ ಸರ್ಕಾರಕ್ಕೂ ಒತ್ತಡ ತರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಕುತುಬುದ್ದೀನ್ ಖಾಜಿ ಮಾತನಾಡಿ, ಜನಪ್ರತಿನಿಧಿಗಳು ಮಾಡುವಂತ ಕೆಲಸವು ಈಗಾಗಲೇ ಸಾರ್ವಜನಿಕರಿಂದ ಪ್ರಾರಂಭವಾಗಿದ್ದು, ನಮ್ಮನ್ನು ಆಳುವಂತ ರಾಜಕಾರಣಿಗಳು ಅಭಿವೃದ್ಧಿ ಪರವಾದ ಮಹತ್ವಪೂರ್ಣ ಯೋಜನೆಗಳಿಗೆ ಸಹಕಾರ ನೀಡಬೇಕಿದೆ ಎಂದರು.
ಲೋಕಾಪುರ ರಾಮದುರ್ಗ ಸವದತ್ತಿ ಧಾರವಾಡ ರೈಲು ಮಾರ್ಗ ನಿರ್ಮಾಣದಿಂದ ಸಾಕಷ್ಟು ಅನುಕೂಲತೆಗಳು ಒದಗಿಬರಲಿದ್ದು, ಈ ಯೋಜನೆ ಅನುಷ್ಠಾನಗೊಳ್ಳಲು ಸಂಪೂರ್ಣ ಅರ್ಹತೆಯನ್ನು ಪಡೆದಿದೆ. ಬರುವಂತ ಕೇಂದ್ರದ ಬಜೆಟ್‌ನಲ್ಲಿ ಈ ವಿಷಯ ಅಳವಡಿಸುವ ಪ್ರಯತ್ನ ನಡೆಯಬೇಕು. ಸ್ಥಳೀಯ ಶಾಸಕರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಮುಖ್ಯಮಂತ್ರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ ಯೋಜನೆಯು ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನ ಮಾಡಬೇಕು ಎಂದರು.ರೈಲು ಹೋರಾಟ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈಲು ಸಂಪರ್ಕವು ವ್ಯವಸ್ಥಿತವಾಗಿ ನಡೆದಿದ್ದು, ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ರೈಲು ಮಾರ್ಗದ ಸಂಪರ್ಕ ಕಲ್ಪಿಸುವಂತ ಕಾರ್ಯಗಳು ನಡೆಯಬೇಕು. ಈ ನಿಟ್ಟಿನಲ್ಲಿ ಸವದತ್ತಿ ಯಲ್ಲಮ್ಮಾ ದೇವಸ್ಥಾನವು ಪ್ರಮುಖ ಧಾರ್ಮಿಕ ಸ್ಥಾನವಾಗಿರುವುದರಿಂದ ಇಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಈ ಭಾಗದ ಎಲ್ಲ ಸ್ವಾಮೀಜಿಯವರು ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ನಿರಂತರವಾಗಿ 5 ದಿನಗಳ ಕಾಲ ಅರೆ ಬೆತ್ತಲೆಯಾಗಿ ಹೋರಾಟ ಕೈಗೊಂಡ ಕುತುಬುದ್ದೀನ್ ಖಾಜಿಯವರ ಮನವೊಲಿಸಿ ತೆಂಗಿನ ಎಳನೀರು ಕುಡಿಸಿ ಹೊಸಬಟ್ಟೆ ತೊಡಿಸುವ ಮೂಲಕ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು.ಹೋರಾಟ ಸಮಿತಿ ಅಧ್ಯಕ್ಷ ಆರ್.ಬಿ.ಶಂಕರಗೌಡರ, ರಾಜಶೇಖರ ಕಾರದಗಿ, ಮಲ್ಲಿಕಾರ್ಜುನ ಬೇವೂರ, ಫಕ್ರುದ್ದೀನ್ ನದಾಫ, ಜಗದೀಶ ಶಿಂತ್ರಿ, ಐ.ಪಿ.ಪಾಟೀಲ, ಕುಮಾರಸ್ವಾಮಿ ತಲ್ಲೂರಮಠ, ಬಸವರಾಜ ಪ್ರಭುನವರ, ರಾಜಶೇಖರ ನಿಡವಣಿ, ಬಸವರಾಜ ಬಿಜ್ಜೂರ, ಬಿ.ಎಸ್.ಕಪ್ಪಣ್ಣವರ, ಈರಣ್ಣ ಕಾಂತಿಮಠ, ಸುರೇಶ ಸಂಪಗಾಂವಿ, ಬಸವರಾಜ ಪುಟ್ಟಿ, ಆಸಿಫ್ ಬಾಗೋಜಿಕೊಪ್ಪ, ಎಫ್.ವೈ.ಗಾಜಿ, ಅಶ್ವತ ವೈದ್ಯ, ಬಸವರಾಜ ಗುರಣ್ಣವರ, ಪ್ರಭು ಪ್ರಭುನವರ, ಉಮೇಶ ಗೌಡರ, ಬಸವರಾಜ ಅರಮನಿ, ಮಂಜು ಪಾಚಂಗಿ, ಶಫಿ ಬೆಣ್ಣಿ, ಜಗದೀಶ ಶಿರಸಂಗಿ, ಬಸವರಾಜ ಹಂಪಣ್ಣವರ ಉಪಸ್ಥಿತರಿದ್ದರು.ಸವದತ್ತಿ ಯಲ್ಲಮ್ಮಾ ರೈಲು ಮಾರ್ಗದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಮತ ಇಲ್ಲಿ ಅತ್ಯವಶ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿಯವರು ಮತ್ತು ಸಂಸದರಾದ ಜಗದೀಶ ಶೆಟ್ಟರವರರೊಂದಿಗೆ ಪಕ್ಷಾತೀತವಾಗಿ ಸಮಾಲೋಚನೆ ಮಾಡಿ ಮುಖ್ಯಮಂತ್ರಿಗಳೊಂದಿಗೆ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ಈ ರೈಲ್ವೆ ಯೋಜನೆಯನ್ನು ಪ್ರಾಮಾಣಿಕವಾಗಿ ಯಶಸ್ವಿಗೊಳಿಸುತ್ತೇನೆ.
-ವಿಶ್ವಾಸ ವೈದ್ಯ, ಶಾಸಕರು.ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಉಗ್ರ ಹೋರಾಟಗಳು ಈ ಸಂದರ್ಭದಲ್ಲಿ ಅತ್ಯವಶ್ಯವಾಗಿದ್ದು, ಒಟ್ಟಾರೆಯಾಗಿ ಸವದತ್ತಿಗೆ ರೈಲು ಮಾರ್ಗವನ್ನು ತರುವಂತ ಹೋರಾಟ ಮುಂದುವರೆಯಬೇಕು.
-ವಿರುಪಾಕ್ಷ ಮಾಮನಿ, ಬಿಜೆಪಿ ಮುಖಂಡರು.