ಸಾರಾಂಶ
- ಚನ್ನಗಿರಿ ತಾಲೂಕಿನಲ್ಲಿ ತಕ್ಷಣದಿಂದಲೇ ಅಕ್ರಮ ಮಾರಾಟ ನಿಲ್ಲಿಸಲು ಅಬಕಾರಿ ಡಿವೈಎಸ್‌ಪಿ ಖಡಕ್ ಎಚ್ಚರಿಕೆ
- ಅಬಕಾರಿ ಇಲಾಖೆ ಕ್ರಮ ಜಾರಿ ಖಚಿತಪಡಿಸಿಕೊಂಡ ಬಳಿಕವೇ ಧರಣಿ ಸ್ಥಗಿತ: ಮುಖಂಡ ರಂಗನಾಥ್ ಸ್ಪಷ್ಟನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿತಾಲೂಕಿನಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ, ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಅಬಕಾರಿ ಇಲಾಖೆ ಮುಂಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರಕ್ಕೆ 5ನೇ ದಿನಕ್ಕೆ ಕಾಲಿಟ್ಟಿದೆ.
ಈ ಹಿನ್ನೆಲೆ ಅಬಕಾರಿ ಇಲಾಖೆಯ ಡಿವೈಎಸ್‌ಪಿ ಮುರುಡೇಶ್ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳದಲ್ಲಿ ತಾಲೂಕಿನ ಎಲ್ಲ ಬಾರ್ ಮತ್ತು ಬ್ರಾಂಡಿ ಅಂಗಡಿಗಳ ಮಾಲೀಕರನ್ನು ಕರೆಸಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮುಖಂಡರು ಸೂಕ್ತ ಕ್ರಮವಾಗುವವರೆಗೂ ಧರಣಿ ಶತಸಿದ್ಧ ಎಂದು ಇಲಾಖೆಗೆ ಉತ್ತರಿಸಿದರು. ಡಿವೈಎಸ್‌ಪಿ ಮುರುಡೇಶ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ದೇವರ ಹೆಸರಿನಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಮದ್ಯ ಮಾರಾಟ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನು ಇಂದಿನಿಂದಲೇ ನಿಲ್ಲಿಸಬೇಕು. ಇಂತಹ ಹಣದಿಂದ ದೇವಸ್ಥಾನಗಳನ್ನು ಕಟ್ಟಬಾರದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.ಮಾರಾಟಗಾರರಿಗೆ ಮದ್ಯವನ್ನು ಮಾರಾಟ ಮಾಡಲು ಕಾನೂನು ಪ್ರಕಾರ ಪರವಾನಗಿ ತೆಗೆದುಕೊಂಡಿರುತ್ತೀರಿ. ನೀವು ಕಾನೂನು ಪ್ರಕಾರ ಮದ್ಯ ಮಾರಾಟ ಮಾಡಲು ಅವಕಾಶಗಳಿವೆ. ಅದರ ಪ್ರಕಾರವಾಗಿಯೇ ಮಾರಾಟ ಮಾಡಬೇಕು. ಕಾನೂನು ಮೀರಿ ಮದ್ಯ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಎಚ್ಚರಿಸಿದರು.
ಜಿಲ್ಲಾ ಅಬಕಾರಿ ಅಪರಾಧ ತಡೆಯ ತಂಡ ಇಂದಿನಿಂದ ತಾಲೂಕಿನ ಪ್ರತಿ ಹಳ್ಳಿಗಳಿಗೂ ತೆರಳಿ ಕಾನೂನು ಬಾಹಿರವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು. ಕಾನೂನುಬಾಹಿರ ಮದ್ಯ ಮಾರಾಟ ಮಾಡಲು ಪ್ರೋತ್ಸಾಹ ನೀಡುವ ಬಾರುಗಳ ಮಾಲೀಕರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು. 18 ವರ್ಷದೊಳಗಿನ ಮಕ್ಕಳಿಗೆ ಮದ್ಯ ಮಾರಾಟ ಮಾಡುವುದು ಅಪರಾಧವಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಮದ್ಯ ಮಾರಾಟಗಾರರು ಅರಿದು, ಕಾನೂನು ಪಾಲನೆ ಮಾಡಬೇಕು ಎಂದರು.ತಾಲೂಕು ಬಾರ್ ಮಾಲೀಕರ ಸಂಘದ ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿ, ಇನ್ನು ಮುಂದೆ ಕಾನೂನು ಬಾಹಿರ ಮದ್ಯ ಮಾರಾಟ ಮಾಡುವವರಿಗೆ ತಾಲೂಕಿನ ಎಲ್ಲ ಬಾರ್ ಮಾಲೀಕರು ಇಂದಿನಿಂದಲೇ ಮದ್ಯ ಸರಬರಾಜು ಸಂಪೂರ್ಣ ನಿಲ್ಲಿಸಲಿದ್ದಾರೆ. ನಿಮ್ಮ ಹೋರಾಟ ಇಲ್ಲಿಗೆ ನಿಲ್ಲಿಸಬೇಕು ಎಂದು ಧರಣಿನಿರತರಿಗೆ ಮನವಿ ಮಾಡಿದರು.
ಖಚಿತ ಬಳಿಕ ಮಾತ್ರವೇ ಸ್ಥಗಿತ:ಆಗ ಹೋರಾಟದ ಪ್ರಮುಖ ಮುಖಂಡ ಬಸವಾಪುರ ರಂಗನಾಥ್ ಮಾತನಾಡಿ, ಚನ್ನಗಿರಿ ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಸಂಪೂರ್ಣ ನಿಯಂತ್ರಣ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಧರಣಿನಿರತರನ್ನು ಕೇವಲ ಸಮಾಧಾನಪಡಿಸಲು ಹೇಳುವ ಮಾತುಗಳನ್ನು ಕೇಳುವುದಿಲ್ಲ. ಅಕ್ರಮವಾಗಿ ಮಾರಾಟ ಮಾಡುವ ಮದ್ಯ ಸಂಪೂರ್ಣವಾಗಿ ನಿಂತಿದೆ ಎಂಬ ಬಗ್ಗೆ ನಮ್ಮ ಸಂಘಟನೆಯಿಂದ ಪರಿಶೀಲನೆ ನಡೆಸಿ ಖಚಿತ ಮಾಹಿತಿ ದೊರೆತ ನಂತರವೇ ಧರಣಿ ಸ್ಥಗಿತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಅಬಕಾರಿ ಅಧಿಕಾರಿಗಳಾದ ಕೆ.ಶಿವರಾಜ್, ಪ್ರೇಮ್ ಸಿಂಗ್, ಎಡಿಸಿ ಕೃಷ್ಣ ಹರಿ, ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ, ಅಬಕಾರಿ ಅಪರಾಧ ತಡೆಯ ತಂಡದವರು, ತಾಲೂಕಿನ ಎಲ್ಲ ಬಾರ್‌ಗಳ ಮಾಲೀಕರು ಹಾಜರಿದ್ದರು.- - - ಬಾಕ್ಸ್ * ₹5 ಸಾವಿರ ಬಹುಮಾನ ಘೋಷಣೆ ಖಡ್ಗ ಸಂಘಟನೆ ಅಧ್ಯಕ್ಷ ಬಿ.ಆರ್.ರಘು ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಾನೂನು ಬಾಹಿರ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಖಚಿತ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಬೇಕು. ಹೀಗೆ ಮಾಹಿತಿ ನೀಡಿದ ವ್ಯಕ್ತಿಗೆ ಸಂಘಟನೆ ವತಿಯಿಂದ ₹5 ಸಾವಿರ ಬಹುಮಾನ ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಸಭೆಯಲ್ಲಿ ಘೋಷಿಸಿದರು.
- - - -3ಕೆಸಿಎನ್‌ಜಿ1.ಜೆಪಿಜಿ:ಅಕ್ರಮ ಮದ್ಯ ಮಾರಾಟ ನಿಯಂತ್ರಣ ಕುರಿತು ಚನ್ನಗಿರಿ ಅಬಕಾರಿ ಇಲಾಖೆ ಆವರಣದಲ್ಲಿ ಡಿವೈಎಸ್‌ಪಿ ಮುರುಡೇಶ್ ನೇತೃತ್ವದಲ್ಲಿ ತಾಲೂಕಿನ ಎಲ್ಲ ಬಾರ್ ಮತ್ತು ಬ್ರಾಂಡಿ ಅಂಗಡಿಗಳ ಮಾಲೀಕರ ಸಭೆ ನಡೆಯಿತು.-3ಕೆಸಿಎನ್‌ಜಿ2:
ಚನ್ನಗಿರಿ ಪಟ್ಟಣದ ಅಬಕಾರಿ ಇಲಾಖೆ ಆವರಣದಲ್ಲಿ ಕಾನೂನುಬಾಹಿರ ಮದ್ಯ ಮಾರಾಟ ನಿಲ್ಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಐದನೇ ದಿನವೂ ಧರಣಿ ಮುಂದುವರಿಸಿದರು.