ಸತ್ಯ ಧರ್ಮ ಶಾಂತಿ ಪ್ರೀತಿ ಕರುಣೆ ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳೇ ಧರ್ಮದ ನಿಜವಾದ ತಳಹದಿ
ಹರಪನಹಳ್ಳಿ: ಧರ್ಮವೆಂಬುದು ಕೇವಲ ಆಚರಣೆಗಳಿಗೆ ಸೀಮಿತವಾದುದಲ್ಲ.ಅದು ಮಾನವನ ಬದುಕಿಗೆ ಬೆಳಕನ್ನು ನೀಡುವ ಪವಿತ್ರ ಮಾರ್ಗ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.
ಅವರು ಶನಿವಾರ ಎಂ.ಜಿ.ಪಟೇಲ ನಗರದ ಚಂದ್ರಸಿರಿಯಲ್ಲಿ ಟಿ.ಎ.ಚನ್ನವೀರಸ್ವಾಮಿ ಚಂದ್ರಸಿರಿ ಚಾರಿಟೇಬಲ್ ಟ್ರಸ್ಟಿನ ಲೋಕಾರ್ಪಣೆ, ಲಾಂಛನ ಬಿಡುಗಡೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದರು.ಸತ್ಯ ಧರ್ಮ ಶಾಂತಿ ಪ್ರೀತಿ ಕರುಣೆ ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳೇ ಧರ್ಮದ ನಿಜವಾದ ತಳಹದಿ ಎಂದ ಅವರು, ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವ ಬದುಕಿನಲ್ಲಿ ಶಾಂತಿ ಸಹನೆ ಸಂಸ್ಕಾರ ಮತ್ತು ಮಾನವೀಯತೆ ಅತ್ಯಂತ ಅವಶ್ಯಕವಾಗಿದೆ. ಇವುಗಳನ್ನು ಬೆಳೆಸುವ ಸದುದ್ದೇಶದಿಂದ ಚಾರಿಟೇಬಲ್ ಟ್ರಸ್ಟ್ ಸ್ಥಾಪಿತಗೊಂಡು ಜನಹಿತ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.
ವೀರಶೈವ ಧರ್ಮ ಸಂಸ್ಕೃತಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದಲ್ಲಿ ನಾವೂ ಕೂಡ ಭಾಗಿಯಾಗುತ್ತೇವೆ, ಧರ್ಮ ಬಿಟ್ಟು ಯಾವುದೂ ಇಲ್ಲ, ತಾತ್ವಿಕ ತಳಹದಿಯ ಮೇಲೆ ಸಮಾಜ ನಡೆಯುತ್ತದೆ, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನೂತನವಾಗಿ ಸ್ಥಾಪನೆಯಾಗಿರುವ ಚಂದ್ರ ಸಿರಿ ಟ್ರಸ್ಟ್ ವಿದ್ಯಾರ್ಥಿಗಳ ಶಿಕ್ಷಣ ಸೇರಿದಂತೆ ಅನೇಕ ಜನಪರ, ಸಮಾಜಮುಖಿ ಕಾರ್ಯ ಮಾಡುವಂತಾಗಲಿ ಎಂದು ಶುಭಕೋರಿದರು.
ಜ್ಞಾನ ಕ್ರಿಯಾತ್ಮಕವಾದ ಚಿಂತನೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯ.ಇವುಗಳನ್ನು ಬೆಳೆಸುವ ಶಕ್ತಿ ಧರ್ಮ ಮತ್ತು ಆಧ್ಯಾತ್ಮಿಕ ಚಿಂನತೆಗಳಲ್ಲಿದೆ. ಧರ್ಮ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಸಂಸ್ಕೃತಿ ಉಳಿದರೆ ಸಮಾಜ ಉಳಿಯುತ್ತದೆ. ಸಮಾಜ ಉಳಿದರೆ ಮಾನವೀಯತೆ ಬೆಳೆಯುತ್ತದೆ. ಟ್ರಸ್ಟ್ ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಾರ್ಯ ನಿರ್ಮಿಸುವ ಸಂಕಲ್ಪ ತೊಟ್ಟಿದೆ ಎಂದರು.ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯನವರು ಸರ್ವರಿಗೂ ಅನುಕೂಲವಾಗುವಂತಹ ಕೆಲಸ, ಕಾರ್ಯಗಳನ್ನು ಟ್ರಸ್ಟ್ ಮಾಡಲಿ ಎಂದು ಆಶಿಸಿದರು. ಚಂದ್ರ ಸಿರಿ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ, ಪ್ರತೀಕ್ ಮಾತನಾಡಿ, ಚಂದ್ರ ಸಿರಿ ಚಾರಿಟಬಲ್ ಟ್ರಸ್ಟ್ ನ ಉದ್ದೇಶ ಶಿಕ್ಷಣದ ಸಬಲೀಕರಣ, ಆರೋಗ್ಯ ಶಿಬಿರ, ರೈತರಿಗೆ ನೆರವು, ಮಹಿಳಾ ಸಬಲೀಕರಣ ಸೇರಿದಂತೆ ಸಮಾಜಮುಖಿ ಕಾರ್ಯ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಮಾನಿಹಳ್ಳೀ ಮಳೆಯೋಗೀಶ್ವರ ಶಿವಾಚಾರ್ಯರು, ಕೂಡ್ಲಗಿಯ ಡಾ. ಪ್ರಶಾಂತ ಸಾಗರ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ಟಿ.ಎಂ.ಚಂದ್ರಶೇಖರಯ್ಯ, ಡಾ. ಟಿ.ಎಂ.ವಿಶ್ವನಾಥ, ಉತ್ತಮಚಂದ್ ಜೈನ್, ಟಿ.ಎಂ. ಚನ್ನವೀರಸ್ವಾಮಿ, ಟಿ.ಎಂ. ರಾಜಶೇಖರ್ ಪಾಲ್ಗೊಂಡಿದ್ದರು. ಟಿ.ಎಂ. ನಾಗರತ್ನಮ್ಮ, ಲಲಿತಮ್ಮ,ಜೆ.ಎಂ. ಸಂಭಾಷಿಣಿ ಮತ್ತು ಟಿ.ಎಂ. ಪ್ರತೀಕ ಉಪಸ್ಥಿತರಿದ್ದರು. ಮಡಿವಾಳಸ್ವಾಮಿ ಸ್ವಾಗತಿಸಿದರು. ಸಿ.ಎಂ. ಕೊಟ್ರಯ್ಯ ನಿರೂಪಿಸಿದರು.