ಸಾರಾಂಶ
ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಎನ್.ಐ.ಎಗೆ ವಹಿಸಬೇಕೆಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸಕಲೇಶಪುರ : ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಎನ್.ಐ.ಎಗೆ ವಹಿಸಬೇಕೆಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಬಿಜೆಪಿ ವತಿಯಿಂದ ಸೋಮವಾರ ನಡೆದ ಧರ್ಮಸ್ಥಳ ಚಲೋ ಯಾತ್ರೆ ಅಂಗವಾಗಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ನೇತೃತ್ವದಲ್ಲಿ ಧರ್ಮಸ್ಥಳ ಯಾತ್ರೆಗೆ ತಾಲೂಕಿನ ಮಾರನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದ ನಂತರ ಮಾತನಾಡಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಬಿಜೆಪಿ ವತಿಯಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಭಕ್ತಾದಿಗಳು ಧರ್ಮಸ್ಥಳಕ್ಕೆ ಹೊರಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆಯವರು ಜನರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅದರೆ ಇತ್ತೀಚೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಿಂದೂ ಧರ್ಮದ ವಿರುದ್ಧ ಇಲ್ಲಸಲ್ಲದ ಷಡ್ಯಂತ್ರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳಕ್ಕೆ ಕಪ್ಪುಚುಕ್ಕಿಯನ್ನು ಮೆಸೆಯುವ ಪ್ರಯತ್ನ ಮಾಡಲಾಗುತ್ತಿದೆ.
ಹಿಂದೂಗಳ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಹಿಂದೂಗಳೇ ಒಂದಾಗಿ ಧರ್ಮ ರಕ್ಷಣೆಗೆ ನಿಲ್ಲಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಲೆ ಹಿಂದೂ ಧರ್ಮ ಮತ್ತು ಧಾರ್ಮಿಕ ಕೇಂದ್ರಗಳನ್ನು ಗುರಿ ಮಾಡಿ ಚ್ಯುತಿಯಾಗುವಂತಹ ಕೆಲಸ ಮಾಡುತ್ತಿದೆ. ಇದೀಗ ಧರ್ಮಸ್ಥಳ ಮಂಜುನಾಥನ ಸನ್ನಿಧಿ ಬಗ್ಗೆ ಅಪಪ್ರಚಾರ ಮಾಡುವವರಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಒಂದು ಕಡೆ ಜನರಿಗೆ ಅನುಮಾನ ಬರುವ ರೀತಿ ನಡೆದುಕೊಳ್ಳುತ್ತಿದೆ. ಈ ಪ್ರಕರಣದ ಹಿಂದೆ ಹಲವಾರು ಕಾಣದ ಕೈಗಳ ಕೈವಾಡವಿದ್ದು ಈ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ನೈಜ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದು ಶ್ರೀ ಕ್ಷೇತ್ರಕ್ಕೆ ದಕ್ಕೆ ಬಂದ ಸಂರ್ಧಭದಲ್ಲಿ ಹಿಂದೂಗಳು ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದಲೇ ಹಾಸನ ಜಿಲ್ಲೆಯಿಂದ ಸುಮಾರು ಏಳು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಖಾವಂದರರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ಮಾಸ್ಕ್‌ಮ್ಯಾನ್ ಮುಸುಕು ಹಾಕಿಕೊಂಡು ಆತ ಹೇಳಿದ ಕಡೆಯಲೆಲ್ಲ ನೆಲ ಅಗೆದರೂ ಒಂದೇ ಒಂದು ಶವದ ಗುರುತು ಸಿಗಲಿಲ್ಲ. ಇದರಿಂದ ಜನರಿಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಆದ್ದರಿಂದ ಎನ್.ಐ.ಗೆ ವಹಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಪ್ರಧಾನ ಕಾರ್ಯದರ್ಶಿಯರಾದ ಅಗ್ನಿ ಸೋಮಶೇಖರ್, ಮಧು ಬೊಮ್ಮನಕೆರೆ, ಪಕ್ಷದ ಹಿರಿಯ ಮುಖಂಡರುಗಳಾದ ಬ್ಯಾಕರವಳ್ಳಿ ಜಯಣ್ಣ, ಜಯಪ್ರಕಾಶ್ ದೊಡ್ಡದೀಣೆ, ಪುನೀತ್ ಬನ್ನಹಳ್ಳಿ, ಅಲ್ಪ ಸಂಖ್ಯಾತ ಮುಖಂಡ ನೇಮಾನ್ ಶೇಕ್, ಪುರಸಭಾ ಸದಸ್ಯ ಪ್ರದೀಪ್, ನವೀನ್ ಶೆಟ್ಟಿ ಮುಂತಾದವರು ಹಾಜರಿದ್ದರು.