ಧರ್ಮಸ್ಥಳ ವಿವಾದ: ಸರ್ಕಾರದ ನಿರ್ಧಾರ ಅನುಮಾನ ಹುಟ್ಟಿಸಿದೆ

| Published : Aug 26 2025, 01:05 AM IST

ಸಾರಾಂಶ

ನಾವು ಕಾಂಗ್ರೆಸ್‌, ಜೆಡಿಎಸ್‌ ವಿರೋಧಗಳಲ್ಲ. ದೇಶದ್ರೋಹಿಗಳನ್ನು ವಿರೋಧಿಸುತ್ತೇವೆ. ಆರ್‌ಎಸ್‌ಎಸ್‌ ದೇಶಭಕ್ತಿಯ ಸಂಸ್ಕಾರ ಹೇಳುತ್ತದೆ. ದೇಶಕ್ಕಿಂತ ದೊಡ್ಡದು ವೋಟು, ಜಾತಿ, ಅಧಿಕಾರವೂ ಅಲ್ಲ. ದೇಶವೇ ದೊಡ್ಡದಾಗಿದೆ. ದೇಶಕ್ಕೆ ಗೌರವ ಕೊಡುವ ಕೆಲಸವಾಗಬೇಕು ಎಂದು ಸಿ.ಟಿ. ರವಿ ಹೇಳಿದರು.

ಕುಷ್ಟಗಿ:

ಧರ್ಮಸ್ಥಳದ ಧರ್ಮಾಧಿಕಾರಿ ಮೇಲೆ ಅನ್ಯರು ದೂರು ನೀಡಿದರೆ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಪರಿಶೀಲನೆ ಮಾಡದೆ ಕ್ರಮಕ್ಕೆ ಮುಂದಾಗಿರುವುದು ಅನುಮಾನ ಹುಟ್ಟಿಸಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂತ್‌ ಎಂ.ಡಿ. ಸಮೀರ್‌ಗೆ ಪ್ರಭಾವಿ ಸಚಿವರು ಆಶ್ರಯ ಕೊಟ್ಟು ಹಣಕಾಸಿನ ಸಹಾಯ ಮಾಡಿದ್ದಾರೆಂಬ ಅನುಮಾನವಿದೆ. ಕೂಡಲೇ ಗಿರೀಶ ಮಟ್ಟಣ್ಣನವರ ಮತ್ತು ಮಹೇಶ ತಿಮರೋಡಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕಿದೆ. ಅವರಿಗೆ ಬಂದಿರುವ ಹಣಕಾಸಿನ ಜಾಲ ಕಂಡು ಹಿಡಿಯುಬೇಕು. ಇದಕ್ಕೆ ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದರು.

ಕಾಂಗ್ರೆಸ್‌ನವರಿಗೆ ವಂದೇ ಮಾತರಂ, ನಮಸ್ತೆ ಸದಾ ವತ್ಸಲೇ ಅಂದರೆ ಮೆಣಸಿನಕಾಯಿ ಇಟ್ಟಂತೆ ಆಗುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಎಂದರೆ ಬಾಯಿಗೆ ಸಕ್ಕರೆ ಹಾಕಿದಂತೆ ಆಗುತ್ತದಂತೆ ಎಂದು ಕಿಡಿಕಾರಿದರು.

ನಾಡಹಬ್ಬ ದಸರಾಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿರುವುದಕ್ಕೆ, ನಾಡು, ನುಡಿ, ಪರಂಪರೆ, ಸಂಸ್ಕೃತಿ, ನಾಡದೇವತೆಯ ಬಗ್ಗೆ ಅಭಿಮಾನ, ಭಕ್ತಿ ಯಾರಿಗೆ ಇರುತ್ತದೆಯೋ ಅವರು ಉದ್ಘಾಟಿಸಬೇಕು. ನಾವು ಅವರನ್ನು ವಿರೋಧಿಸಿಲ್ಲ. ಆದರೆ, ಇಸ್ಲಾಂ ಏನು ಹೇಳುತ್ತದೆ ಎಂದು ಹೇಳಿದ್ದೇನೆ. ಇಸ್ಲಾಂ ಒಳಗೆ ಅಲ್ಲಾನ ಹೊರತಾಗಿ ಉಳಿದವರನ್ನು ಆರಾಧಿಸಲು ಅವಕಾಶವಿಲ್ಲ ಎಂದು ಕೇಳಿದ್ದೇನೆ. ಅದಕ್ಕಾಗಿ ಈ ಗೊಂದಲ ಸೃಷ್ಟಿಯಾಗಿದೆ ಎಂದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಬಸವರಾಜ ಹಳ್ಳೂರು ಸೇರಿದಂತೆ ಅನೇಕರು ಇದ್ದರು.