ಒಂದು ಚುನಾಯಿತ ಸರ್ಕಾರ ಮಾಡಲಾಗದ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಕೆಲಸ, ಕಾರ್ಯಗಳನ್ನು ಶ್ರೀಕ್ಷೇತ್ರದ ಮೂಲಕ ವೀರೇಂದ್ರ ಹೆಗ್ಗಡೆಯವರು ಬದ್ಧತೆಯಿಂದ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮೀಣ ಜನರ ಸ್ವಾವಲಂಬಿ ಬದುಕು ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವರದಾನವಾಗಿದೆ ಎಂದು ಸಂಸ್ಥೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಜಯನಗರ ಬಡಾವಣೆಯ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಚುನಾಯಿತ ಸರ್ಕಾರ ಮಾಡಲಾಗದ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಕೆಲಸ, ಕಾರ್ಯಗಳನ್ನು ಶ್ರೀಕ್ಷೇತ್ರದ ಮೂಲಕ ವೀರೇಂದ್ರ ಹೆಗ್ಗಡೆಯವರು ಬದ್ಧತೆಯಿಂದ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಾಧಿಕಾರಿಗಳ ಹುಟ್ಟುಹಬ್ಬದ ಅಂಗವಾಗಿ ಹರಿಹರಪುರ ಮತ್ತು ಬಲ್ಲೇನಹಳ್ಳಿಯಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ ಕನ್ನಡಕಗಳ ಅಗತ್ಯವಿದ್ದ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾ ಯೋಜನಾಧಿಕಾರಿ ಯೋಗೇಶ್ ಕನ್ನಡಕ ವಿತರಿಸಿದರು. ಟ್ರಸ್ಟ್‌ನಿಂದ ಅಕ್ಕಿಹೆಬ್ಬಾಳು ಗ್ರಾಮದ ಹೇಮಾವತಿ ಹೊನ್ನಾರು ವೇದಿಕೆ, ಸಾಕ್ಷಿಬೀಡು ಶ್ರೀಲಕ್ಷ್ಮಿದೇವಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್, ಅಟ್ಟುಪ್ಪೆ ಗ್ರಾಮದ ಶ್ರೀಮಾರಮ್ಮ ದೇವಸ್ಥಾನ ಹಾಗೂ ತುಳಸಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಲಾ 50 ಸಾವಿರ ರು. ಸಹಾಯ ಧನ ಚೆಕ್ ನೀಡಿದರು.

ಮಂಡ್ಯ ಜಿಲ್ಲಾ ಕಿವುಡರ ಸಂಘದ ಕೋರಿಕೆ ಮೇರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಗಂಜಿಗೆರೆ ಮಂಜೇಗೌಡ, ಹೊಸ ಹೊಳಲು ಜಯಲಕ್ಷ್ಮಿ ಮತ್ತು ದೊಡ್ಡಯಾಚನೆ ಹಳ್ಳಿ ಸೋಮಶೇಖರ್ ಅವರಿಗೆ ಹಾಗೂ ಬಿಹಾರ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಲಂಬಾಡಿ ಕಾವಲು ಗ್ರಾಮದ ವಿದ್ಯಾರ್ಥಿಗಳಾದ ಪ್ರೀತಂ ಮತ್ತು ಅಜಯ್ ಅವರಿಗೆ ಟ್ರಸ್ಟ್ ಆರ್ಥಿಕ ಸಹಾಯ ನೀಡಿ ಗೌರವಿಸಿತು.

ಈ ವೇಳೆ ವೇದಿಕೆ ಚನ್ನರಾಯಪಟ್ಟಣ ಜಿಲ್ಲಾ ಉಪಾಧ್ಯಕ್ಷೆ ನಳಿನಾ, ಸದಸ್ಯರಾದ ಅಕ್ಕಿಹೆಬ್ಬಾಳು ರಘು, ಮೊಟ್ಟೆಮಂಜು , ಸುನಿತಾ ದಯಾನಂದ್, ಕಸಾಪ ತಾಲೂಕು ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣ ತಿಲಕ್, ಕೆ.ಆರ್.ನೀಲಕಂಠ, ತಾಲೂಕು ಯೋಜನಾಧಿಕಾರಿಗಳಾದ ತಿಲಕರಾಜ್, ಪ್ರಸಾದ್, ಮೇಲ್ವಿಚಾರಕರಾದ ಸಂಗೀತ, ಟ್ರಸ್ಟಿ ಗಂಜಿಗೆರೆ ಮಹೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್.ಪ್ರವೀಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.