ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜಾಗೃತಿಯ ಅರಿವು ಮೂಡಿಸುವಂತಹ ಕಾರ್ಯಕ್ರಮ ರೂಪಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಅರ್ಥಪೂರ್ಣ. ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚಾಗಿ ಆಯೋಜಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಿಸುವಂತಾಗಬೇಕು ಎಂದು ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿ ಕರೆ ನೀಡಿದರು.ನಗರದ ರಂಗಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ, ಅಖಿಲ ಕರ್ನಾಟಕ ಜನಜಗೃತಿ ವೇದಿಕೆ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯಿಂದ ಗಾಂಧಿಸ್ಮೃತಿ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ, ರಾಷ್ಟ್ರಪಿತ ಮಹಾತ್ಮಗಾಂಧಿ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಮದ್ಯ ವ್ಯಸನಿಗಳು ಹೆಚ್ಚಾಗಲು ಗ್ರಾಮೀಣ ಭಾಗಗಳಲ್ಲೂ ಮದ್ಯದ ಅಂಗಡಿಗಳಿಗೆ ಪರವಾನಗಿಯನ್ನು ಮಿತಿ ಮೀರಿ ವಿತರಿಸುತ್ತಿರುವ ಹಿನ್ನೆಲೆ ಸಮಾಜದ ಸ್ವಾಸ್ಥತೆ ಹಾಳಾಗಲು ಕಾರಣವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಲಿನ ಸಂಘಗಳಿಗಿಂತ ಮಧ್ಯದ ಅಂಗಡಿಗಳು ಹೆಚ್ಚಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವುದು ಕಳವಳಕಾರಿ ಎಂದು ಹೇಳಿದರು.ಮದ್ಯ ವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸಿ ಶಿಬಿರಗಳನ್ನು ಆಯೋಜಿಸುವ ಜೊತೆಗೆ ಹೆಣ್ಣು ಮಕ್ಕಳ ಸ್ವಾವಲಂಭಿ ಬದುಕಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿರುವುದು, ಮಕ್ಕಳ ಶೈಕ್ಷಣಾಭಿವೃದ್ಧಿಗೆ ವಿದ್ಯಾರ್ಥಿ ವೇತನ, ಕೆರೆಗಳ ನಿರ್ಮಾಣ, ನಿರ್ಗತಿಕರಿಗೆ ವಸತಿ ಸೌಲಭ್ಯ. ಹಾಲು ಸಂಘಗಳ ನಿರ್ಮಾಣ ಸೇರಿದಂತೆ ಹಲವಾರು ಸಾಮಾಜಿಕ ಸೇವೆ ಅಭಿನಂದನೀಯ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಮಾತನಾಡಿ, ಕೋಲಾರ ಜಿಲ್ಲೆಯನ್ನು ಮದ್ಯಪಾನದಿಂದ ಮುಕ್ತಗೊಳಿಸಲು ಶ್ರೀ ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಂದ ಜನಜಾಗೃತಿ ಕಾರ್ಯಕ್ರಮ ರೂಪಿಸುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಚಿಂತನೆ ಮತ್ತು ಕನಸು ನನಸು ಮಾಡಲು ಸಂಸ್ಥೆಯು ಹಮ್ಮಿ ಕೊಂಡಿರುವಂತ ಕಾರ್ಯಕ್ರಮಗಳು ಪ್ರತಿ ಮನೆ, ಮನೆಗೂ ತಲುಪಬೇಕು, ನಿಸ್ವಾರ್ಥ ಸೇವೆಯ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವುದು ಅರ್ಥಪೂರ್ಣ ಯೋಜನೆಯಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜನಜಾಗೃತಿ ಸಂಸ್ಥೆಯ ಹೊಳಲಿ ಪ್ರಕಾಶ್, ಜನ ಜಾಗೃತಿಯ ಅಧ್ಯಕ್ಷ ಎಂ.ಕೆ.ವಾಸುದೇವ, ಸ್ಮೌಟ್ಸ್ ಆಯುಕ್ತ ಕೆ.ಆರ್.ಸುರೇಶ್, ಅರುಣಮ್ಮ, ಮುಳಬಾಗಿಲು ಯೋಜನಾಧಿಕಾರಿ ಹರೀಶ್, ಸಂಸ್ಥೆಯ ಜಿಲ್ಲಾ ನಿರ್ದೇಶಕ ಪದ್ದಯ್ಯ ಸಿ.ಎಚ್. ತಾಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ, ಜನ ಜಾಗೃತಿ ಜಿಲ್ಲಾ ಉಪಾಧ್ಯಕ್ಷ ಟಮಕ ವೆಂಕಟೇಶ್, ನಂಜುಂಡಯ್ಯ ಶ್ರೇಷ್ಠಿ, ಕೆ.ರಾಜೇಶ್ ಸಿಂಗ್, ಕಾರ್ಯದರ್ಶಿ ತಿಮ್ಮಯ್ಯ ನಾಯ್ಕ್, ಸ್ಕೌಟ್ ಬಾಬು, ಲಕ್ಷ್ಮಣ್ ಇದ್ದರು.