ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಕೃತಿ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆಗೆ ಅಪರಿಮಿತ ಸೇವೆ ನೀಡಲಾಗಿದ್ದು, ಕೇವಲ ಮಾನವರ ಕಲ್ಯಾಣವಷ್ಟೇ ಅಲ್ಲದೆ ಪ್ರಕೃತಿ ಹಾಗೂ ಸಕಲ ಜೀವ ಸಂಕುಲದ ಸಂರಕ್ಷಣೆಗೂ ಕಟಿಬದ್ದವಾಗಿದೆ ಎಂದು ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ. ಶೀನಪ್ಪ ತಿಳಿಸಿದರು.ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮಾಂತರ ತಾಲೂಕಿನ ಯೋಜನಾ ಕಚೇರಿಯಲ್ಲಿ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಅಮ್ಮನವರ ಆಶಯದಂತೆ ಯೋಜನೆ ವತಿಯಿಂದ ಅನೇಕ ಪ್ರಕೃತಿ ಸಂರಕ್ಷಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆರೆಗಳು ಊರಿನ ಜಲಪಾತ್ರೆಗಳು. ಕೆರೆ ಸಂರಕ್ಷಣೆಗಾಗಿ 2016ರಲ್ಲಿ ಪೂಜ್ಯರು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮವನ್ನು ಜಾರಿಗೆ ತಂದರು. ಈ ಸಾಲಿನಲ್ಲಿ ರಾಜ್ಯದ 160 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದ್ದು, ಪುನಶ್ಚೇತನ ಕಾರ್ಯಕ್ಕೆ ಸುಮಾರು 1760 ರೈತರು, ಮಹಿಳೆಯರನ್ನು ಒಳಗೊಂಡು ಸಮಿತಿ ರಚಿಸಲಾಗಿತ್ತು. ಈ ಬೃಹತ್ ಕಾರ್ಯದಲ್ಲಿ ಸಂಸ್ಥೆಯ 160 ನೋಡೆಲ್ ಅಧಿಕಾರಿಗಳು, 7 ಜನ ನುರಿತ ಇಂಜಿನಿಯರ್ ಗಳ ತಂಡ, ಕೆರೆ ಸಮಿತಿ ಪದಾಧಿಕಾರಿಗಳು ಶ್ರಮಿಸಿದ್ದಾರೆ. ಸುಮಾರು 242 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳು 4304ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಗಳನ್ನು ಬಳಸಲಾಗಿದೆ. ರೈತರು 12,50 ಲಕ್ಷ ಲೋಡ್ ಹೂಳನ್ನು ತಮ್ಮ ಕೃಷಿ ತೋಟಗಳಿಗೆ ಬಳಸಿದ್ದಾರೆ. ಇವರಿಗೆ ಒಟ್ಟು 889 ಕೆರೆಗಳು ಪುನಶ್ಚೇತನಗೊಂಡಿದ್ದು, ಜಾನುವಾರಗಳಿಗೆ ನೀರಿನ ಬವಣೆ ನೀಗಿಸಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಸಾವಿರಕ್ಕೂ ಅಧಿಕ ಕೆರೆ ಪುನಶ್ಚೇತನ ಗೊಳ್ಳಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಶ್ಯಾಮಸುಂದರ್ ನೀರಿನ ಮಹತ್ವ, ನೀರಿನ ಅಗತ್ಯದ ಕುರಿತು ಮಾಹಿತಿ ನೀಡಿದರು.ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಗ್ರಾಮಾಂತರ ಯೋಜನಾಧಿಕಾರಿ ಸುರೇಶ್, ಹಣಕಾಸು ಪ್ರಬಂಧಕ ನವೀನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮೀ ಸೇರಿ ಕಚೇರಿಯ ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.