ರಾಜ್ಯದ ಬಡವರು, ನಿರ್ಗತಿಕರು ಹಾಗೂ ದುರ್ಬಲ ವರ್ಗದ ಜನರಿಗೆ ನೆರವು ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಇಂತಹ ಮಹತ್ತರ ಸೇವಾ ಕಾರ್ಯಗಳ ನಡುವೆಯೂ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಗುಂಪುಗಳು ನಡೆಸುತ್ತಿರುವ ಅಪಪ್ರಚಾರ ಮತ್ತು ಸುಳ್ಳು ಆರೋಪಗಳು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಸೇವೆಗಳ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದು, ಸರ್ಕಾರಕ್ಕೂ ಸಾಧ್ಯವಾಗದ ಅನೇಕ ಜನಪರ ಕಾರ್ಯಗಳನ್ನು ಸಂಸ್ಥೆ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ತೇರಾಪಂಥ್ ಭವನದಲ್ಲಿ ಶನಿವಾರ ಆಯೋಜಿಸಿದ್ದ 2054ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮದ ತಳಹದಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಸಮನ್ವಯಗೊಳಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫಲಾನುಭವಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.ರಾಜ್ಯದ ಬಡವರು, ನಿರ್ಗತಿಕರು ಹಾಗೂ ದುರ್ಬಲ ವರ್ಗದ ಜನರಿಗೆ ನೆರವು ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಇಂತಹ ಮಹತ್ತರ ಸೇವಾ ಕಾರ್ಯಗಳ ನಡುವೆಯೂ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಗುಂಪುಗಳು ನಡೆಸುತ್ತಿರುವ ಅಪಪ್ರಚಾರ ಮತ್ತು ಸುಳ್ಳು ಆರೋಪಗಳು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುಳ್ಳು ಸುದ್ದಿಗಳ ಮೂಲಕ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇಂತಹ ಅಪಪ್ರಚಾರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.ಮದ್ಯವರ್ಜನ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದ ಶಾಸಕರು, ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿಟ್ಟವರು ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಬೇಕು. ಶಿಬಿರ ಮುಗಿಸಿ ಹೋದ ಬಳಿಕ ಪುನಃ ಮದ್ಯದ ಚಟಕ್ಕೆ ಒಳಗಾಗದೇ ಕುಟುಂಬದ ಆಧಾರಸ್ತಂಭಗಳಾಗಿ, ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಮದ್ಯಪಾನವು ಮಹಾಪಾಪ ಮಾತ್ರವಲ್ಲ, ಕುಟುಂಬ ಮತ್ತು ಸಮಾಜವನ್ನು ಹಾಳು ಮಾಡುವ ಶಾಪವಾಗಿದೆ ಎಂದರು.ಮದ್ಯ ವ್ಯಸನವು ಸಂಬಂಧಗಳು, ಆರೋಗ್ಯ ಹಾಗೂ ವ್ಯಕ್ತಿಯ ಮಾನಮರ್ಯಾದೆಯನ್ನು ನಾಶಮಾಡುತ್ತದೆ. ಜೀವನದಲ್ಲಿ ದೊರೆತಿರುವ ಬದಲಾವಣೆಯ ಅವಕಾಶವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮದ್ಯ ವ್ಯಸನದಿಂದ ಮುಕ್ತರಾಗಿ ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್, ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷೆ ರೇಖಾ ಸುರೇಶ್, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬೈರಮುಡಿ ಚಂದ್ರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಸದಸ್ಯರಾದ ಗಿರೀಶ್, ಉಮಾನಾಥ್ ಸುವರ್ಣ, ಯೋಜನಾಧಿಕಾರಿ ರಾಜೇಶ್, ಮೇಲ್ವಿಚಾರಕ ಚಿರಂತ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.