ಸಾರಾಂಶ
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನಡೆಸುತ್ತಿರುವ ಸಮಾಜಮುಖಿ ಸೇವೆಗಳ ಬಗ್ಗೆ ಅಪಪ್ರಚಾರ ನಡೆಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಈ ಸಮಾಜ ಕಂಟಕರ ಷಡ್ಯಂತ್ರಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಪರಿಸರದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡುತ್ತಿದೆ. ಕೆಲವು ಸಮಾಜ ವಿದ್ರೋಹಿ ಎಡಪಂಥೀಯ ಮನಃಸ್ಥಿತಿಯ ಯುಟ್ಯೂಬರ್‌ಗಳು ಮತ್ತು ಹೋರಾಟಗಾರರು ಕೋಟ್ಯಾಂತರ ಭಕ್ತರ ಶ್ರದ್ಧಾಕೇಂದ್ರ ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಅಪಪ್ರಚಾರ ಮಾಡುತ್ತಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನಡೆಸುತ್ತಿರುವ ಸಮಾಜಮುಖಿ ಸೇವೆಗಳ ಬಗ್ಗೆ ಅಪಪ್ರಚಾರ ನಡೆಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಈ ಸಮಾಜ ಕಂಟಕರ ಷಡ್ಯಂತ್ರಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.
ಸರ್ಕಾರ ಕಾನೂನಾತ್ಮಕ ನಡೆಸುವ ಎಸ್.ಐ.ಟಿ. ತನಿಖೆಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ಅಸಂಬದ್ಧ ವಿಚಾರಗಳನ್ನು ವೈಭವೀಕರಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿರುವ ಕುತಂತ್ರದ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ.ಸರ್ಕಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ. ತನಿಖೆಯ ವರದಿ ಶೀಘ್ರ ಬಿಡುಗಡೆಗೊಳಿಸಿ, ಸತ್ಯಾಂಶವನ್ನು ಜನತೆಯ ಮುಂದಿಡಬೇಕು. ಕರಾವಳಿಯ ಪ್ರತೀ ಮನೆಗಳು ಧಾರ್ಮಿಕ ಅಸ್ಮಿತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು, ಧಾರ್ಮಿಕ ಶ್ರದ್ಧಾ ನಂಬಿಕೆಗೆ ಧಕ್ಕೆಯುಂಟಾದರೆ ಯಾವುದೇ ಬೆಲೆ ತೆತ್ತು ಅದನ್ನು ಉಳಿಸಿಕೊಳ್ಳಲು ಜನತೆ ಶಕ್ತರಾಗಿದ್ದಾರೆ. ಸರ್ಕಾರ ತಕ್ಷಣ ಎಚ್ಛೆತ್ತು ಅಪಪ್ರಚಾರದಲ್ಲಿ ತೊಡಗಿರುವ ಸಮಾಜ ಕಂಟಕರ ವಿರುದ್ಧ ಕೂಲಂಕಷ ತನಿಖೆ ನಡೆಸಿ ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಟ ಹಾವಳಿಯನ್ನು ಪರಿಹರಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಪ್ರಗತಿ ಕಾಣದೇ ಇದ್ದಲ್ಲಿ ಬಿಜೆಪಿ ಜನ ಬೆಂಬಲದೊಂದಿಗೆ ಜನಪರ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಸಿದ್ದಾರೆ.