ಸಾರಾಂಶ
ಉಪ್ಪಳ್ಳಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.ಉಪ್ಪಳ್ಳಿಯ ಜೈಜಾಸ್ ಕನ್ವೆನ್‌ಷನ್ ಹಾಲ್‌ನಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿಂದ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ ಮತ್ತು ಸತ್ಯ ಸಮಾಜದಲ್ಲಿ ಪ್ರಮುಖ ಘಟ್ಟಗಳಾಗಿದ್ದು, ಧರ್ಮದಿಂದ ನಡೆಯುವುದು, ಸತ್ಯ ನುಡಿಯುವುದು ಇದನ್ನು ಅರ್ಥಮಾಡಿಕೊಂಡು ಧರ್ಮವನ್ನು ದುರುಪ ಯೋಗಪಡಿಸಿಕೊಳ್ಳದೇ ಮನುಷ್ಯನ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾಯಕವೇ ಕೈಲಾಸ ಎಂಬಂತೆ ನಮ್ಮ ಬದುಕು ನಮ್ಮ ಕೈಯಲ್ಲೇ ಇದೆ. ನಮ್ಮ ಬದುಕಿನ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ಸ್ವಸಹಾಯ ಎಂದರೆ ಒಬ್ಬರನ್ನೊಬ್ಬರು ಪರಸ್ಪರ ಸಹಾಯ ಮಾಡುವುದು ಎಂದರ್ಥ. ಆಧ್ಯಾತ್ಮಿಕತೆ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಸಂಸ್ಕಾರವನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತನ್ನ ಯೋಜನೆಗಳ ಮೂಲಕ ಕಾಯಕದಲ್ಲಿ ದೇವರನ್ನು ಕಾಣಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ್ಪಳ್ಳಿಯ ಮಾಡೆಲ್ ಇಂಗ್ಲೀಷ್ ಶಾಲೆ ಪ್ರಾಂಶುಪಾಲ ಎಂ.ಎನ್. ಷಡಕ್ಷರಿ ಮಾತನಾಡಿ, ಸಮಾಜದಲ್ಲಿರುವ ಸಾಮಾನ್ಯ ಜನರನ್ನು ಸಮೂಹ ಚಿಂತನೆಯಲ್ಲಿ ತೊಡಗಿಸುವ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನುಷ್ಠಾನಗೊಳಿಸುತ್ತಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥನ ದೈವಶಕ್ತಿ ಮೂಲಕ ಸಮಾಜವನ್ನು ಒಂದು ಗೂಡಿಸುವ ಕೆಲಸ ಮಾಡುತ್ತಿದ್ದು ವೀರೇಂದ್ರ ಹೆಗ್ಗಡೆ ಈ ಕಾರ್ಯ ಒಂದು ಕ್ರಾಂತಿ ಎಂದು ಬಣ್ಣಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜೆ ಪುನಸ್ಕಾರಗಳು, ಸಾಮೂಹಿಕ ಚಿಂತನೆಗಳು ನಡೆಯುತ್ತಿದ್ದು, ಧರ್ಮದ ಹೆಸರಿನಲ್ಲಿ ಧರ್ಮ ಒಡೆಯುವ ಈ ಕಾಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಡೆದ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್ ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ಸ್ವಸಹಾಯ ಸಂಘಗಳ ರಚನೆ ಮೂಲಕ 10 ರು. ಉಳಿತಾಯದ ಮೂಲಕ 3.5 ಸಾವಿರ ಕೋಟಿ ಉಳಿತಾಯದ ಹಣ ಸಂಗ್ರಹಿಸಿದೆ. ವಿದ್ಯಾದಾನ, ಅನ್ನದಾನ, ಔಷಧಿ ದಾನ ಮತ್ತು ಅಭಯ ದಾನ ಪ್ರತಿ ಹಳ್ಳಿಗಳಲ್ಲೂ ಆಗಬೇಕು ಎಂಬ ಪರಿಕಲ್ಪನೆ ಮೂಲಕ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಾನವ ತನ್ನ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ಆಧ್ಯಾತ್ಮಕ ಆರೋಗ್ಯವೂ ಕೂಡ ಬಹಳ ಮುಖ್ಯ ಎಂದ ಪ್ರಕಾಶ್‌ರಾವ್, ಸತ್ಯನಾರಾಯಣ ಪೂಜೆ ನಡೆಸುವುದು ಧಾರ್ಮಿಕ ಆರೋಗ್ಯವು ಕೂಡ ಚೆನ್ನಾಗಿರಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ಉಪ್ಪಳ್ಳಿಯ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಪ್ರಗತಿಬಂಧು ಒಕ್ಕೂಟಗಳ ಅಧ್ಯಕ್ಷೆ ಅನು ರಾಜೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭೂ ದಾಖಲೆಗಳ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಂ.ಎಸ್. ಜಯಚಂದ್ರ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ವಿಶಾಲಾಕ್ಷಿ, ತಾಲೂಕು ಕೃಷಿ ಅಧಿಕಾರಿ ರಚನ ಇದ್ದರು.
3 ಕೆಸಿಕೆಎಂ 1ಚಿಕ್ಕಮಗಳೂರಿನ ಉಪ್ಪಳ್ಳಿಯ ಜೈಜಾಸ್ ಕನ್ವೆನ್‌ಷನ್ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮವನ್ನು ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು.