ಸಾರಾಂಶ
ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ರಾಜ್ಯದೆಲ್ಲೆಡೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳಿದರು.ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆ ಹೀಗೆ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಸಿಎ ನಿವೇಶನ ನೀಡುವಂತೆ ಪಪಂಗೆ ಮನವಿ ಮಾಡಿದ್ದಾರೆ. ಅಧ್ಯಕ್ಷ ಹಾಗೂ ಸರ್ವ ಸದಸ್ಯರ ಜತೆ ಚರ್ಚಿಸಿ ಸೂಕ್ತ ಜಾಗ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಸಂಗಣ್ಣ ಟೆಂಗಿನಕಾಯಿ ಮಾತನಾಡಿ, ಸರ್ಕಾರಗಳು ಮಾಡದಂತಹ ಮಹಿಳೆಯರ ಸ್ವಾವಲಂಬನೆ ಬದುಕಿಗಾಗಿ ಉಪಯುಕ್ತವಾಗುವಂತಹ ಸಾಕಷ್ಟು ಕೆಲಸ ಕಾರ್ಯಗಳನ್ನು ಇಡೀ ರಾಜ್ಯದೆಲ್ಲೆಡೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಪ್ರಾಮಾಣಿಕತೆಯಿಂದ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಶಕುಂತಲಾಮ್ಮದೇವಿ ಮಾಲಿಪಾಟೀಲ ಮಾತನಾಡಿ, ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಸ್ತ್ರೀ ಶಕ್ತಿ ಮಹಿಳಾ ಸಂಘಗಳು ಸಾಕಷ್ಟು ಪ್ರಾಮಾಣಿಕವಾಗಿ ಸೇವೆ ನೀಡುತ್ತಿವೆ. ಜತೆಗೆ ಶ್ರೀ ಮಂಜುನಾಥ ಸಂಸ್ಥೆ ಬಡವರಿಗೆ ಸಾಲ ಸೌಲಭ್ಯ, ಕೆರೆ ನಿರ್ಮಾಣ, ಹೈನುಗಾರಿಕೆ, ದೇವಸ್ಥಾನ, ಮದ್ಯವರ್ಜನ ಶಿಬಿರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮೂಲಕ ಎಲ್ಲರ ಮನೆ ಮಾತಾಗಿದೆ ಎಂದು ಹೇಳಿದರು.ಮಂಜುನಾಥ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ಜಿಲ್ಲಾ ಜನ ಜಾಗೃತಿ ಸದಸ್ಯರಾದ ಕರಬಸಯ್ಯ ಬಿನ್ನಾಳ, ವೀರಣ್ಣ ನಿಂಗೋಜಿ, ಶರಣಬಸಪ್ಪ ದಾನಕೈ, ತಳಕಲ್ ಎಸ್.ಬಿ.ಐ ಬ್ಯಾಂಕ್ ಅಧಿಕಾರಿ ರಮೇಶ, ತಾಲೂಕು ಯೋಜನಾಧಿಕಾರಿ ಸತೀಶ ಟಿ, ಹಾಗೂ ಒಕ್ಕೂಟದ ಅಧ್ಯಕ್ಷ ಶೈಲಜಾ ಮಾಲಿಪಾಟೀಲ್ ಹಾಗೂ ಸ್ವ ಸಹಾಯ ಸಂಘಗಳ ಸಾಕಷ್ಟು ಮಹಿಳೆಯರು ಇದ್ದರು.