ಸಾರಾಂಶ
ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ನಿರ್ದೇಶನದ ಹಾಗೂ ಅಜಿತ್ ಕುಮಾರ್ (ಜ್ಯೂನಿಯರ್ ರಾಜ್ ಕುಮಾರ್) ಅಭಿನಯದ ಧರ್ಮಿಷ್ಠ ಚಲನಚಿತ್ರದ ಚಿತ್ರೀಕರಣ ತಾಲೂಕಿನ ಎಂ.ಶೆಟ್ಟಹಳ್ಳಿಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ನಿರ್ದೇಶನದ ಹಾಗೂ ಅಜಿತ್ ಕುಮಾರ್ (ಜ್ಯೂನಿಯರ್ ರಾಜ್ ಕುಮಾರ್) ಅಭಿನಯದ ಧರ್ಮಿಷ್ಠ ಚಲನಚಿತ್ರದ ಚಿತ್ರೀಕರಣ ತಾಲೂಕಿನ ಎಂ.ಶೆಟ್ಟಹಳ್ಳಿಯಲ್ಲಿ ನಡೆಯಿತು.ಪತ್ರಕರ್ತ, ನಿರ್ದೇಶಕ ಎಚ್.ವಿ.ಪುಟ್ಟಸ್ವಾಮಿ ಮಾತನಾಡಿ, ರಾಗಶ್ರೀ ಫಿಲಂಸ್ ಪ್ರೊಡಕ್ಷನ್ ವತಿಯಿಂದ ಈಗಾಗಲೇ ತ್ರಿಭುಜ ಮತ್ತು ತಿರುವು ಚಲನ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದು, ಪ್ರದರ್ಶನಗೊಂಡಿದ್ದವು.
ಇದೀಗ ‘ಧರ್ಮಿಷ್ಠ’ ಕನ್ನಡ ಚಲನಚಿತ್ರದ ಚಿತ್ರೀಕರಣವನ್ನು ಕಳೆದ 10 ದಿನಗಳಿಂದ ನಿರಂತರವಾಗಿ ಮಾಡಲಾಗುತ್ತಿದೆ. ಧರ್ಮಿಷ್ಠ ಎಂದರೆ ನ್ಯಾಯ, ಧರ್ಮ, ಸತ್ಯವನ್ನು ಎತ್ತಿ ಹಿಡಿಯುವ ಪಾತ್ರ. ಧರ್ಮಿಷ್ಠ ಚಿತ್ರಕ್ಕೂ, ಕಥೆಗೂ ಜ್ಯೂನಿಯರ್ ರಾಜ್‌ಕುಮಾರ್ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಕಥೆ, ಸಾಹಿತ್ಯ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಈ ಚಿತ್ರದಲ್ಲಿ 2 ಕೌಟುಂಬಿಕ ಗೀತೆಗಳಿವೆ, ತಂದೆ, ತಾಯಿ ಹಾಗೂ ಮಗಳು ಮೂವರು ಸೇರಿರುವ ಹಾಡುಗಳಾಗಿವೆ ಎಂದರು.ತಾಲೂಕಿನ ಮೇಳಾಪುರ ಗ್ರಾಮದ ಸ್ಥಳೀಯ ಕಲಾವಿದೆ ನಿರೀಕ್ಷ ನಾಯಕ ನಟಿಯಾಗಿ, ಸುರೇಶ್ ಗೋಲ್ಡ್ ರವರು ನಿರ್ಮಾಪಕ ಜೊತೆಗೆ ಮಲ್ಲಪ್ಪ ಎಂಬ ಪಾರ್ಥದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೈಸೂರಿನ ಮಲ್ಲಿಗೆ ಮಂಜುಳ ಅವರು ಸಹ ನಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಛಾಯಾಗ್ರಹಣವನ್ನು ಮೈಸೂರಿನ ಚೇತನ್ ನಿರ್ವಹಿಸುತ್ತಿದ್ದಾರೆ. ಈವರೆಗೂ ತಾಲೂಕಿನ ಮೇಳಾಪುರ, ಟಿ.ಎಂ. ಹೊಸೂರು ಗೇಟ್, ಕೆ.ಶೆಟ್ಟಹಳ್ಳಿ ಹಾಗೂ ಎಂ.ಶೆಟ್ಟಹಳ್ಳಿ ಗ್ರಾಮಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ ಎಂದು ಅವರು ಹೇಳಿದರು.ಚಿತ್ರೀಕರಣ ವೇಳೆ ಸ್ಥಳೀಯ ಕಲಾವಿದರಾದ ಲಯನ್ ಎನ್.ಸರಸ್ವತಿ, ಚಂದಗಾಲು ಶಂಕರ್, ಶೆಟ್ಟಹಳ್ಳಿ ಸುರೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.