ನಾನಾ ಬೇಡಿಕೆ ಈಡೇರಿಸುವಂತೆ ಸಂಸದೆ ಅಂಗಡಿ ಕಚೇರಿ ಎದುರು ಧರಣಿ

| Published : Jan 24 2024, 02:05 AM IST

ನಾನಾ ಬೇಡಿಕೆ ಈಡೇರಿಸುವಂತೆ ಸಂಸದೆ ಅಂಗಡಿ ಕಚೇರಿ ಎದುರು ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಇ-ಶ್ರಮ್‌ ಯೋಜನೆಯಲ್ಲಿ ಗುರುತಿನ ಚೀಟಿ ಪಡೆದಿರುವ ಎಲ್ಲ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರಿಗೆ ವೇತನ ಪಾವತಿ ಹಾಗೂ ಕಾನೂನುಬದ್ಧ ಸೌಲಭ್ಯಗಳನ್ನು ಜಾರಿಗೊಳಿವೇಕು ಎಂದು ಸಿಐಟಿಯು, ಸ್ಕೀಂ ನೌಕರರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಸಂಘಟಿತ ಕಾರ್ಮಿಕರ ಕಾರ್ಯಗಳಿಗೆ ₹3 ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಹಾಗೂ ಸ್ಕೀಂ ನೌಕರರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿರುವ ಸಂಸದೆ ಮಂಗಳಾ ಅಂಗಡಿ ಅವರ ಕಚೇರಿ ಮುಂದೆ ಧರಣಿ ನಡೆಸಿದರು.

ದೇಶದ ಎಲ್ಲ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಿ ಕೇಂದ್ರ ಸರ್ಕಾರ ವಾರ್ಷಿಕ ₹3 ಲಕ್ಷ ಕೋಟಿ ಹಣವನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸಬೇಕು. ಇ-ಶ್ರಮ್‌ ಯೋಜನೆಯಲ್ಲಿ ಗುರುತಿನ ಚೀಟಿ ಪಡೆದಿರುವ ಎಲ್ಲ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರಿಗೆ ವೇತನ ಪಾವತಿ ಹಾಗೂ ಕಾನೂನುಬದ್ಧ ಸೌಲಭ್ಯಗಳನ್ನು ಜಾರಿಗೊಳಿವೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯತಿ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿ ಹಾಗೂ ಇತರೆ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಜಾರಿಗೊಳಿಸುವುದು, ವಾಣಿಜ್ಯ ವಾಹನಗಳ ಚಾಲಕರು ಹಾಗೂ ಸಹಾಯಕರಿಗೆ ಪ್ರತ್ಯೇಕ ಕಲ್ಯಾಣಮಂಡಳಿ ರಚಿಸಿ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಆಹಾರ , ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳನ್ನು ಕಾಯಂ ಮಾಡುವ ಮುಖಾಂತರ ಹಕ್ಕುಗಳನ್ನು ಸಾರ್ವತ್ರಿಕರಣಗೊಳಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ ಒಂದು ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಿ ನೌಕರರೆಂದು ಪರಿಣಿಸಬೇಕು. 3ರಿಂದ 6ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಎನ್‌ಇಪಿ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಸ್ ನಾಯಕ ಮಾತನಾಡಿ, ಇಡೀ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಸ್ಕೀಂ ನೌಕರರು ಎಂದರೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಕ್ಷರ ದಾಸೋಹ ಸೇರಿ ವಿವಿಧ ದುಡಿಯುವ ಸಂಘಟನೆಗಳು ಬರುತ್ತವೆ. ಮೊದಲ ದಿನ ಸ್ಕೀಂ ನೌಕರರ ಪ್ರತಿಭಟನೆ , ಎರಡನೇ ದಿನ ರೈತರ ಪ್ರತಿಭಟನೆ, ಮೂರನೇ ದಿನ ಕಟ್ಟಡ ಕಾರ್ಮಿಕರ ಪ್ರತಿಭಟನೆ, ಮೂರು ದಿನ ಕಾರ್ಮಿಕರ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಗಂಗಮ್ಮ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತರಿಗೆ ₹ 15 ಸಾವಿರ ಕೊಡಬೇಕು, ಮೂಲ ವೇತನ ₹ 31 ಸಾವಿರ ಇನ್ನೂ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿ.ಎ.ಖರಾಡೆ, ಜಿ.ಎಂ.ಜೈನೆಖಾನ, ಜಿ.ವಿ.ಕುಲಕರ್ಣಿ, ಎಲ್‌.ಎಸ್‌. ನಾಯಕ, ದಿಲೀಪ ವಾರ್ಕೆ, ಮಂದಾ ನೇವಗಿ, ಗೋದಾವರ ರಾಜಾಪೂರೆ, ಚನ್ನಮ್ಮ ಗಡ್ಕರಿ, ಪಾರ್ವತಿ ಸಾಲಿಮಠ, ವಿಜಯಾ ಕಲಾದಗಿ, ಎ.ಎಸ್‌.ಪಾಟೀಲ ಸೇರಿದಂತೆ ಸಿಐಟಿಯು ಸಂಘಟನೆ ಸದಸ್ಯರು,ಅಂಗನವಾಡಿ ಕಾರ್ಯರು ,ಅಂಗನವಾಡಿ ಸಹಾಯಕಿಯರು ಪಾಲ್ಗೊಂಡಿದರು.