ರೊಟ್ಟಿ ಮಾರಾಟ ಮಾಡಿ ಅತಿಥಿ ಉಪನ್ಯಾಸಕರ ಧರಣಿ

| Published : Dec 17 2023, 01:45 AM IST

ಸಾರಾಂಶ

ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ಖಾಯಮಾತಿ ಒಂದೇ ಮುಖ್ಯ ಬೇಡಿಕೆಯಾಗಿದೆ. ಅತಂತ್ರದಲ್ಲಿ ಬದುಕುತ್ತಿರುವ ಅತಿಥಿ ಉಪನ್ಯಾಸಕರ ಬದುಕುಳಿಯುವ ಹೋರಾಟ ಇದಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೊಟ್ಟಿ ಮಾರಾಟ ಮಾಡುವ ಮೂಲಕ ಜಿಲ್ಲಾಡಳಿತ ಭವನದ ಮುಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಶನಿವಾರ ವಿನೂತನವಾಗಿ ಪ್ರತಿಭಟನೆ ಮಾಡಿ ಗಮನ ಸೆಳೆದರು.

ಪ್ರತಿಭಟನೆ ಉದ್ದೇಶಿಸಿ ರಾಜ್ಯ ಸ.ಪ್ರ.ದ.ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯ ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿ, ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ಖಾಯಮಾತಿ ಒಂದೇ ಮುಖ್ಯ ಬೇಡಿಕೆಯಾಗಿದೆ. ಅತಂತ್ರದಲ್ಲಿ ಬದುಕುತ್ತಿರುವ ಅತಿಥಿ ಉಪನ್ಯಾಸಕರ ಬದುಕುಳಿಯುವ ಹೋರಾಟ ಇದಾಗಿದೆ ಎಂದರು.

ಸರ್ಕಾರವು ಈ ನಿಟ್ಟಿನಲ್ಲಿ ಶೀಘ್ರವಾಗಿ ಅತಿಥಿ ಉಪನ್ಯಾಸಕರ ಬೇಡಿಕೆಯಾದ ಸೇವಾ ಕಾಯಂಮಾತಿ ಮಾಡುವುದನ್ನು ಲಿಖಿತ ರೂಪದಲ್ಲಿ ನೀಡಬೇಕು. ಉತ್ತರ ಕರ್ನಾಟಕದ ಜನತೆಯ ಮುಖ್ಯ ಆಹಾರವಾದ ಬಿಳಿಜೋಳದ ರೊಟ್ಟಿಯನ್ನು ಬಾಗಲಕೊಟೆ ಜಿಲ್ಲೆಯ ಅತಿಥಿ ಉಪನ್ಯಾಸಕರಾದ ನಾವು ಬೀದಿಯಲ್ಲಿ ಕುಳಿತು ಮಾರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದೆವು ಎಂದರು.

ಅತಿಥಿ ಉಪನ್ಯಾಸಕ ಪ್ರೊ.ಸಂಗಮೇಶ ಬ್ಯಾಳಿ ಮಾತನಾಡಿ, ನಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹು ದಿನಗಳಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಜರೂರಾಗಿ ಸೇವಾ ಭದ್ರತೆ ನೀಡಿ, ಕಾಯಂಮಾತಿ ಮಾಡಬೇಕು. ಇದರಿಂದ ಅತಿಥಿ ಉಪನ್ಯಾಸಕರ ಸಾವಿರಾರು ಕುಟುಂಬಗಳಿಗೆ ಜೀವನ ನೀಡುವುದರ ಜೊತೆಗೆ ಪದವಿ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದಂತೆ ಆಗುತ್ತದೆ ಎಂದರು.

ಡಾ.ಮನೋಹರ ಪೂಜಾರ, ಡಾ.ಶಶಿಕಲಾ ಜೋಳದ, ಪ್ರೊ.ನಾಗಯ್ಯ ಜ್ಯೋತೆಪ್ಪನವರ, ಸಂತೋಷ ಕಳ್ಳಿಮನಿ, ಸುನೀಲ್ ಮಠಪತಿ ಜಗದೀಶ ಮೊಗ್ನೂರ, ಎಂ ವೈ.ಬಡಿಗೇರ್,ಡಾ.ಪಿಕೆ.ಕಾರಬರಿ, ಡಾ.ನಂದಾ ಇಟಕರ, ಡಾ.ಸಂತೋಷ್ ಕಾಳನ್ನವರ,ಪ್ರೊ.ವಸುಂದರಾದೇವಿ ವೈದ್ಯ, ಡಾ.ಶಾಂತಪ್ಪ, ಮಲ್ಲಿಕಾರ್ಜುನ ರಾಂಪೂರ, ಪ್ರೊ.ಕೀರ್ತಿ ಕುಲಕರ್ಣಿ, ವಾಯ್.ಎಂ. ಹಾಲಿಗೇರಿ, ಪ್ರೊ.ನಾರಾಯಣ ಪತ್ತಾರ, ರಾಘವೇಂದ್ರ ಬಡಿಗೇರಿ, ಕ್ರಷ್ನಾ ನಾಯಕ, ಪ್ರೊ. ಕರಿಗೌಡರ ಬಾಗಲಕೋಟೆ ಪಟ್ಟಣದ ಸ.ಪ್ರ.ದ ಮಹಿಳಾ ಕಾಲೇಜು, ನವನಗರದ ಸ.ಪ್ರ.ದ ಕಾಲೇಜು ಅತಿಥಿ ಉಪನ್ಯಾಸಕರ ಸೇರಿದ ಜಿಲ್ಲೆಯ ವಿವಿಧ ಕಾಲೇಜುಗಳ ಅತಿಥಿ ಉಪನ್ಯಾಸಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.