ಕಾಂತರಾಜ ವರದಿ ಜಾರಿಗಾಗಿ ಇಂದು ಧರಣಿ

| Published : Dec 18 2024, 12:45 AM IST

ಸಾರಾಂಶ

Dharni today for the implementation of the Kantaraja report

-ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ: ಕೆ.ಶಾಂತಪ್ಪ ಮಾಹಿತಿ

-----

ಕನ್ನಡಪ್ರಭ ವಾರ್ತೆ ರಾಯಚೂರು

ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಕಾಂತರಾಜ ಆಯೋಗದ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಾಂತಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ ವರದಿ ಜಾರಿಯಿಂದಾಗಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗುವುದರ ಜೊತೆಗೆ ಬಸವಣ್ಣನವರ ಆಶಯದಂತೆ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಘೋಷ ವಾಕ್ಯದಂತೆ ಅನುದಾನ ಹಂಚಿಕೆಗೂ ನೆರವಾಗಲಿದೆ ಎಂದು ಹೇಳಿದರು.

ಕಾಂತರಾಜ ವರದಿ ಜಾರಿಗೊಳಿಸುವುದಾಗಿ ವಿಧಾನಸಭೆ ಚುನಾವಣೆಯ ಮುಂಚೆ ಭರವಸೆ ನೀಡಿದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರೆಡು ವರ್ಷ ಗತಿಸಿದರೂ ಬೇಡಿಕೆ ಈಡೇರಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.

ಜೆಡಿಎಸ್, ಬಿಜೆಪಿ ಸರ್ಕಾರಗಳಲ್ಲಿ ಹಿಂದುಳಿದ ಜಾತಿಗಳಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಕಟ್ಟಿಕೊಳ್ಳಲು ಅನುದಾನ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ 2 ವರ್ಷಗಳು ಕಳೆದರೂ ಹಿಂದುಳಿದ ಜಾತಿಗಳ ಸಂಘ ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿಲ್ಲ. ಹಿಂದುಳಿದ ಜಾತಿಗಳಿಗೆ ಸೇರಿದ ಅಭಿವೃದ್ಧಿ ನಿಮಗಳಿಗೂ ನಿರೀಕ್ಷೆಯಂತೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಿಂತೆ ಕಾಂತರಾಜ ವರದಿ ಬಹಿರಂಗಗೊಳಿಸಿ, ಆಯೋಗದ ಶಿಫಾರಸ್ಸು ಜಾರಿಗೆ ತರಬೇಕು. ಹಿಂದುಳಿದ ಜಾತಿಗಳಿಗೆ, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ನಿರ್ಲಕ್ಷ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರಗತಿಯ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ: ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಒಕ್ಕೂಟದ ನಿಯೋಗವು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಈ ವೇಳೆ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ ಯಾದವ್, ವಿಜಯ ಭಾಸ್ಕರ್ ಇಟಗಿ, ಜಿ.ಸುರೇಶ್, ಜಂಬಣ್ಣ ಯಾಕ್ಲಾಸಪುರ, ಉದಯ ಕುಮಾರ ವಿನ್ನು, ಈರಪ್ಪಗೌಡ, ಆಂಜನೇಯ ಯಾದವ್, ಸುರೇಖಾ ಸೇರಿ ಅನೇಕರು ಇದ್ದರು.

---

16ಕೆಪಿಆರ್‌ಸಿಆರ್‌ 03: ರಾಯಚೂರು ಡಿಸಿ ಕಚೇರಿಗೆ ತೆರಳಿದ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಸಮಿತಿ ನಿಯೋಗ ಜಿಲ್ಲಾಧಿಕಾರಿ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿತು.