ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ ಮತ್ತೆ ಕಂಟಕ!

| Published : Feb 05 2024, 01:46 AM IST

ಸಾರಾಂಶ

ನಾಲ್ಕು ವರ್ಷಗಳಿಂದ ಭೂಸ್ವಾಧೀನದಲ್ಲೇ ಕಾಲ ಕಳೆಯುತ್ತಿರುವ ಯೋಜನೆಗೆ ಮತ್ತೆ ಅಡ್ಡಿ ಎದುರಾಗಿದ್ದು, ಮುಮ್ಮಿಗಟ್ಟಿ ಗ್ರಾಮಸ್ಥರ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ: ಬಹು ನಿರೀಕ್ಷೆಯ ಧಾರವಾಡ-ಬೆಳಗಾವಿ ನೇರ ರೇಲ್ವೆ ಮಾರ್ಗಕ್ಕೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ಒಂದಿಲ್ಲೊಂದು ಕಾರಣಕ್ಕಾಗಿ ನಾಲ್ಕು ವರ್ಷಗಳಿಂದ ಈ ರೈಲು ಮಾರ್ಗ ದಾರಿ ತಪ್ಪುತ್ತಿದೆ. ಮುಂದಾಲೋಚನೆ ಇಲ್ಲದೇ ಆಗುತ್ತಿರುವ ಎಡವಟ್ಟುಗಳಿಂದ ಯೋಜನೆ ಮತ್ತಷ್ಟು ವಿಳಂಬದ ಹಾದಿ ಹಿಡಿದಿದೆ. ಮೊದಲಿನ ಸಮಸ್ಯೆಗೆ ಮುಕ್ತಿ ಸಿಕ್ತು ಇನ್ನೇನು ಭೂಸ್ವಾಧೀನ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಮತ್ತೊಂದು ವಿಘ್ನ ಎದುರಾಗಿದೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಯುಪ್ಲೆಕ್ಸ್‌ ಕಂಪನಿಯ ಕಾನೂನು ಹೋರಾಟದ ನಂತರ ಮುಮ್ಮಿಗಟ್ಟಿ ರೈತರು, ಗ್ರಾಮಸ್ಥರು ರೇಲ್ವೆ ಮಾರ್ಗಕ್ಕೆ ತಮ್ಮ ಭೂಮಿಯನ್ನು ಕೊಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಹಿಂದೆ ಏನಾಗಿತ್ತು?: ಈ ಮೊದಲು ರೇಲ್ವೆ ಮಾರ್ಗ ಧಾರವಾಡ-ಕ್ಯಾರಕೊಪ್ಪದ ಮೂಲಕ ಹಾಯ್ದು ಬೇಲೂರು ಕೈಗಾರಿಕಾ ಪ್ರದೇಶದ ಯುಪ್ಲೆಕ್ಸ್‌ ಕಂಪನಿ ಮಧ್ಯೆದಲ್ಲಿಯೇ ಹೋಗಿತ್ತು. ಕೋಟ್ಯಾನುಗಟ್ಟಲೇ ವೆಚ್ಚ ಮಾಡಿ ಕಂಪನಿ ನಿರ್ಮಾಣ ಮಾಡಿದ್ದು ಈ ಮಾರ್ಗಕ್ಕೆ ವಿರೋಧ ವ್ಯಕ್ತವಾಗಿತ್ತು. ಕಂಪನಿ ನ್ಯಾಯಾಲಯಕ್ಕೆ ಹೋಗಿ ಹೋರಾಟ ಮಾಡಿ ಕಂಪನಿಯನ್ನು ಉಳಿಸಿಕೊಂಡಿತು.

ಗ್ರಾಮಸ್ಥರ ವಿರೋಧ: ಆಗ, ಮೊದಲಿನ ಮಾರ್ಗ ಕೈ ಬಿಟ್ಟು ಹೊಸ ಮಾರ್ಗ ಹುಡುಕಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗುತ್ತಿದ್ದಂತೆ ಮುಮ್ಮಿಗಟ್ಟಿ ರೈತರು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ವಿರೋಧಕ್ಕೆ ಬಲವಾದ ಕಾರಣವೂ ಇದೆ. ಈಗಾಗಲೇ ಗ್ರಾಮದ ರೈತರು ಕೈಗಾರಿಕೆಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿದ್ದಾರೆ. ಉಳಿದ ಚೂರುಪಾರು ಭೂಮಿಯಲ್ಲಿ ಗ್ರಾಮಸ್ಥರು ಉಪಜೀವನ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಉಳಿದ ಜಮೀನು ಹಾಗೂ ಗ್ರಾಮದ ಮಧ್ಯದಲ್ಲಿಯೇ ರೈಲು ಮಾರ್ಗ ಹೋಗುತ್ತಿದ್ದು ಯಾವುದೇ ಕಾರಣಕ್ಕೂ ಭೂಮಿ ಕೊಡೋದಿಲ್ಲ ಎನ್ನುವುದು ಗ್ರಾಮಸ್ಥರ ವಾದ.

ಗ್ರಾಮ ಹಾಗೂ ಸುತ್ತಲಿನ ಭೂಮಿ ಸೇರಿ ಸುಮಾರು 39 ಎಕರೆ ಜಾಗ ಸ್ವಾಧೀನಕ್ಕೆ 20ಕ್ಕೂ ಹೆಚ್ಚು ರೈತರಿಗೆ ನೋಟಿಸ್‌ಗಳು ಬಂದಿವೆ. ಆದರೆ, ರೈತರು ನೋಟಿಸ್‌ಗಳನ್ನು ಮರಳಿ ಇಲಾಖೆಗೆ ಕಳುಹಿಸಿದ್ದಾರೆ. ಮುಮ್ಮಿಗಟ್ಟಿ ಮಧ್ಯದಲ್ಲಿಯೇ ರೈಲು ಹಳಿ ಹಾಯ್ದು ಹೋಗುತ್ತಿದ್ದು, ಗ್ರಾಮವೇ ಇಬ್ಭಾಗವಾಗುತ್ತದೆ. ರೈತರ ಹಲವು ಜಮೀನುಗಳು ಎರಡು ಭಾಗ ಆಗಲಿವೆ. ಆದ್ದರಿಂದ ಈ ರೈಲು ಮಾರ್ಗ ಕೈ ಬಿಡಿ ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಯುಪ್ಲೆಕ್ಸ್‌ ಒತ್ತಡಕ್ಕೆ ಮಣಿದ ಸರ್ಕಾರ ನಮ್ಮ ವಿರೋಧವನ್ನು ಒಪ್ಪಬೇಕು. ಜೊತೆಗೆ ಗ್ರಾಮಸ್ಥರ ವಿರೋಧದ ಮಧ್ಯೆಯೂ ಭೂಸ್ವಾಧೀನಕ್ಕೆ ಮುಂದಾದರೆ ಉಗ್ರ ರೂಪದ ಹೋರಾಟದ ಎಚ್ಚರಿಕೆಯನ್ನು ಗ್ರಾಮದ ಮುಖಂಡ ಬಸವರಾಜ ಮರಿತಮ್ಮನ್ನವರ ನೀಡಿದರು.

ಮುಮ್ಮಿಗಟ್ಟಿ ಗ್ರಾಮಸ್ಥರ ವಿರೋಧಕ್ಕೆ ಸರ್ಕಾರ ಮಾರ್ಗ ಬದಲಾವಣೆಗೆ ಒಪ್ಪಿಕೊಂಡಲ್ಲಿ ಪುನಃ ರೈಲು ಮಾರ್ಗದ ಸಮೀಕ್ಷೆ ನಡೆಯಬೇಕು. ಆ ಬಳಿಕ ಅಲ್ಲಿರುವ ಜಮೀನಿನ ಭೂಸ್ವಾಧೀನ ಸಂಬಂಧಿತ ಪ್ರಕ್ರಿಯೆ ನಡೆಬೇಕು. ಇದೆಲ್ಲ ನಡೆಯಲು ತಿಂಗಳುಗಳೇ ಬೇಕು. ಹೀಗಾಗಿ, ಧಾರವಾಡ-ಬೆಳಗಾವಿ ಮಧ್ಯೆ ಕಡಿಮೆ ಸಮಯದಲ್ಲಿ ರೈಲು ಓಡಾಡುವ ಕನಸು ಸದ್ಯಕ್ಕಂತೂ ನನಸಾಗೋ ಸಾಧ್ಯತೆ ಇಲ್ಲ ಎಂದು ರೈಲ್ವೆ ಪ್ರಯಾಣಿಕರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಏನಿದು ಯೋಜನೆ?: ಧಾರವಾಡ-ಬೆಳಗಾವಿ ಮಧ್ಯೆ ರಸ್ತೆ ಮಾರ್ಗದಲ್ಲಿ 76 ಕಿ.ಮೀ. ಇದ್ದು ಒಂದು ಗಂಟೆ 15 ನಿಮಿಷಗಳಲ್ಲಿ ಕ್ರಮಿಸಬಹುದು. ಆದರೆ, ರೈಲ್ವೆ ಮಾರ್ಗದಲ್ಲಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಆದ್ದರಿಂದ ಒಟ್ಟು 73 ಕಿಮೀ ದೂರದ ನೂತನ ರೈಲು ಮಾರ್ಗ ಮಾಡಲು ಈ ಹಿಂದೆ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿಯವರ ಕನಸು ಕಂಡಿದ್ದರು.

ಕೇಂದ್ರದ ಬಜೆಟ್‌ನಲ್ಲಿ ಯೋಜನೆ ಘೋಷಣೆ ಸಹ ಆಗಿತ್ತು. ಯೋಜನೆಯಂತೆ ಸದ್ಯ ಧಾರವಾಡ ತಾಲೂಕಿನ ಕ್ಯಾರಕೊಪ್ಪದಿಂದ ಮುಮ್ಮಿಗಟ್ಟಿ ಮಾರ್ಗವಾಗ, ಹೈಕೋರ್ಟ್ ಬಳಿ ಈ ಮಾರ್ಗ ಬಂದು ಮುಂದೆ ಬೆಳಗಾವಿಯತ್ತ ಹೋಗುತ್ತದೆ. ಇದಕ್ಕಾಗಿ ಒಟ್ಟು ₹927.42 ಕೋಟಿ ಅನುದಾನ ಮೀಸಲಿದೆ. ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಜಮೀನು ಬೇಕು. ರಾಜ್ಯ ಸರ್ಕಾರ ಶೇ. 80ರಷ್ಟು ಭೂಮಿ ಸ್ವಾಧೀನ ಮಾಡಿಕೊಟ್ಟಾಗ, ಕೇಂದ್ರ ಸರ್ಕಾರ ಹಂತ ಹಂತವಾಗಿ ಆರಂಭಿಸುತ್ತದೆ.

1984ರಿಂದ 2012ರ ವರೆಗೆ ಮುಮ್ಮಿಗಟ್ಟಿ ಗ್ರಾಮದ ನಾಲ್ಕು ಸಾವಿರ ಎಕರೆಯನ್ನು ಕೈಗಾರಿಕಾ ಪ್ರದೇಶಕ್ಕೆ ನೀಡಲಾಗಿದೆ. ಈಗ ಅಳಿದುಳಿದ ಹೊಲ, ಜಾಗವನ್ನು ಮತ್ತೆ ಸ್ವಾಧೀನ ಮಾಡಿಕೊಂಡರೆ ಇಡೀ ಊರೇ ಗುಳೆ ಹೋಗಬೇಕಾಗುತ್ತದೆ. ಸರ್ಕಾರ ಇದನ್ನು ಯೋಚಿಸಿ ಮಾರ್ಗ ಬದಲಾವಣೆ ಮಾಡಬೇಕು ಎಂದು ಮುಮ್ಮಿಗಟ್ಟಿ ಗ್ರಾಮಸ್ಥ ಬಸವರಾಜ ಮರಿತಮ್ಮನ್ನವರ ಹೇಳಿದ್ದಾರೆ.

ಸಮಾಲೋಚಿಸೋಣ: ಮುಮ್ಮಿಗಟ್ಟಿ ಗ್ರಾಮದಲ್ಲಿ ಹಾಯ್ದು ಹೋಗುವ ರೈಲು ಮಾರ್ಗದ ವಿರುದ್ಧ ಗ್ರಾಮಸ್ಥರು ತಮ್ಮ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಈ ಮಾರ್ಗದಲ್ಲಿ ಬದಲಾವಣೆ ಸಾಧ್ಯವೇ ಎಂಬುದರ ಬಗ್ಗೆ ಸಮಾಲೋಚಿಸಲಾಗುವುದು ಎಂದು ಸಚಿವ ಸಂತೋಷ ಲಾಡ್‌ ತಿಳಿಸಿದ್ದಾರೆ.