ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲು ಮಾರ್ಗ ಯೋಜನೆಗೆ ಭೂ ಸ್ವಾಧೀನಕ್ಕೆ ಮತ್ತೀಗ ಸ್ಥಳೀಯರ ಆಕ್ಷೇಪ ಕೇಳಿ ಬಂದಿದೆ.
ವಿಶೇಷ ವರದಿ
ಧಾರವಾಡ: ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲು ಮಾರ್ಗ ಯೋಜನೆಗೆ ಭೂ ಸ್ವಾಧೀನಕ್ಕೆ ಮತ್ತೀಗ ಸ್ಥಳೀಯರ ಆಕ್ಷೇಪ ಕೇಳಿ ಬಂದಿದೆ.ಈಗಾಗಲೇ ರೈಲು ಮಾರ್ಗದ ನೀಲನಕ್ಷೆ ಸಿದ್ಧಪಡಿಸಿ, ಅದರಲ್ಲಿ ಮಾರ್ಗದ ಗುರುತು ಸಹ ಮಾಡಲಾಗಿದೆ. ಆದರೆ, ಈ ನೂತನ ಮಾರ್ಗದ ನೀಲನಕ್ಷೆ ಗಮನಿಸಿದರೆ, ರೈತರ ತುಂಡು ಭೂಮಿಗಳು ಸೇರಿದಂತೆ ಕೈಗಾರಿಕಾ ಪ್ರದೇಶದ ಪ್ರಮುಖ ಕಟ್ಟಡಗಳು ಸಹ ನೆಲಸಮವಾಗಲಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಂದ ಮಾರ್ಗ ಬದಲಾವಣೆ ಮಾಡುವಂತೆ ಮತ್ತೊಮ್ಮೆ ಆಗ್ರಹ ಕೇಳಿ ಬಂದಿದೆ.
ಈ ರೈಲು ಮಾರ್ಗ ನಿರ್ಮಾಣ ಈ ಹಿಂದೆ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಕನಸು. ಅವರಿದ್ದಾಗ ಯೋಜನೆಯ ಕೆಲಸವೂ ವೇಗವಾಗಿತ್ತು. ದುರದೃಷ್ಟವಶಾತ್ ಅವರ ನಿಧನ ಬಳಿಕ ಯೋಜನೆಗೆ ಗ್ರಹಣ ಹಿಡಿದಿದೆ. ಇದೀಗ ಈ ರೈಲು ಮಾರ್ಗದ ಬಗ್ಗೆ ಸ್ಥಳೀಯ ಊರುಗಳ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಈಗಾಗಲೇ ತಾಲೂಕಿನ ಮುಮ್ಮಿಗಟ್ಟಿ, ಬೇಲೂರು, ಚಿಕ್ಕಮಲ್ಲಿಗವಾಡ ಗ್ರಾಮಸ್ಥರು ಕೈಗಾರಿಕಾ ಪ್ರದೇಶಕ್ಕೆ ತಮ್ಮೆಲ್ಲ ಕೃಷಿ ಭೂಮಿಯನ್ನು ಕೊಟ್ಟಿದ್ದಾರೆ. ಮತ್ತೆ ಈ ರೈಲು ಮಾರ್ಗದ ಯೋಜನೆಯಲ್ಲಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಅನೇಕ ಕೈಗಾರಿಕಾ ಕಟ್ಟಡಗಳು, ಕೇಂದ್ರೀಯ ಉಗ್ರಾಣದ ನೂತನ ಕಟ್ಟಡ ಸೇರಿದಂತೆ ಕೋಟ್ಯಂತರ ಬೆಲೆಬಾಳುವ ಕಟ್ಟಡಗಳು ನೆಲಸಮವಾಗಲಿವೆ. ಅಲ್ಲದೇ ಈ ಹಳಿಯು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 50 ಮೀಟರ್ ಪಕ್ಕದಲ್ಲೇ ಹಾಯ್ದು ಹೋಗಲಿದೆ ಎಂಬ ಮಾಹಿತಿಯೂ ಇದೆ. ಮುಂದಿನ ದಿನಗಳಲ್ಲಿ ಹೆದ್ದಾರಿಯನ್ನು ಮತ್ತಷ್ಟು ಅಗಲೀಕರಣ ಮಾಡುವುದಾದರೆ ಭವಿಷ್ಯದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ರೈಲು ಮಾರ್ಗವನ್ನು ಬದಲಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ಸ್ಥಳೀಯ ಮುಖಂಡರಾದ ವೀರಯ್ಯ ಚಿಕ್ಕಮಠ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಜಮೀನು ಈ ಮಾರ್ಗ ನಿರ್ಮಾಣಕ್ಕೆ ಬೇಕು. ಸಣ್ಣ ರೈತರ ಜಮೀನಿನ ಮೂಲಕ ಈ ಮಾರ್ಗವೇನಾದರೂ ಹಾಯ್ದು ಹೋದರೆ ರೈತರಿಗೆ ತುಂಡು ಜಮೀನಿನಲ್ಲಿ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಒಂದು ಕಡೆ ಕೋಟ್ಯಂತರ ಮೌಲ್ಯದ ಕಟ್ಟಡಗಳು ನೆಲಸಮ, ಮತ್ತೊಂದು ಕಡೆ ಎಕರೆಗೆ ಕೋಟ್ಯಂತರ ಬೆಲೆಬಾಳುವ ಜಮೀನುಗಳು ತುಂಡಾಗಿ ಬೆಲೆ ಕಳೆದುಕೊಳ್ಳುವ ಭಯ. ಈ ಹಿನ್ನೆಲೆ ರೈತರು, ಕಾರ್ಖಾನೆಗಳು ಮಾಲೀಕರು, ಹೋರಾಟಗಾರರು ಈ ರೈಲ್ವೆ ಮಾರ್ಗದ ನಕ್ಷೆಯನ್ನೇ ಬದಲಿಸುವಂತೆ ಆಗ್ರಹಿಸುತ್ತಿದ್ದಾರೆ.ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಈ ಮಾರ್ಗ ನಿರ್ಮಾಣವಾಗಿ ರೈಲು ಸೇವೆ ಪ್ರಾರಂಭವಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆರಂಭದಲ್ಲಿಯೇ ಸರಿಯಾದ ನಿರ್ಧಾರ ಕೈಗೊಂಡಿದ್ದರೆ, ಸರಿಯಾದ ಯೋಜನೆ ನಿರ್ಮಿಸಿದ್ದರೆ, ಪ್ರಸ್ತುತ ಇಂತಹ ವಿಳಂಬದ ಸಂದರ್ಭ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗದ ಕಾಮಗಾರಿ ಮುಗಿಯಲು ಇನ್ನೂ ಅದೆಷ್ಟು ವರ್ಷಗಳು ಬೇಕೋ ಎಂಬ ಬೇಸರ ಧಾರವಾಡ-ಬೆಳಗಾವಿ ಜನರಲ್ಲಿ ಮೂಡಿದೆ.ಹೆಚ್ಚಿದ ವೆಚ್ಚ
ಧಾರವಾಡ-ಬೆಳಗಾವಿ ಮಧ್ಯೆ ಒಟ್ಟು 73 ಕಿ.ಮೀ. ನೂತನ ರೈಲು ಮಾರ್ಗ ನಿರ್ಮಾಣವಾಗಬೇಕಿದೆ. ಸದ್ಯ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಿಂದ ಮುಮ್ಮಿಗಟ್ಟಿ ಮಾರ್ಗವಾಗಿ ಹೈಕೋರ್ಟ್ ಬಳಿಯಿಂದ ಈ ಮಾರ್ಗ ಬಂದು ಮುಂದೆ ಬೆಳಗಾವಿಯತ್ತ ಹೋಗುತ್ತದೆ. ಈ ಮಾರ್ಗಕ್ಕೆ ಮೊದಲು ಅಂದಾಜು ₹927.42 ಕೋಟಿ ವೆಚ್ಚ ನಿರ್ಧರಿಸಿತ್ತು. ವಿಳಂಬ, ಭೂಸ್ವಾಧೀನ ಹಾಗೂ ಇತರ ಕಾರಣಗಳಿಂದ ಅದೀಗ ₹1588 ಕೋಟಿಗೆ ತಲುಪಿದೆ.