ಹುದ್ದೆಗಳ ನೇಮಕಾತಿಗಾಗಿ ಡಿ.1ಕ್ಕೆ ಧಾರವಾಡ ಚಲೋ ಹೋರಾಟ

| Published : Nov 22 2025, 03:15 AM IST

ಹುದ್ದೆಗಳ ನೇಮಕಾತಿಗಾಗಿ ಡಿ.1ಕ್ಕೆ ಧಾರವಾಡ ಚಲೋ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಶೀಘ್ರ ನೇಮಕಾತಿಗಾಗಿ ಧಾರವಾಡ ಚಲೋ ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಸಾಮಾನ್ಯರ ವೇದಿಕೆಯ ಸಂಚಾಲಕ ಯಲ್ಲಪ್ಪ ಹೆಗಡೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶೀಘ್ರ ನೇಮಕಾತಿಗಾಗಿ ಧಾರವಾಡ ಚಲೋ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನ ಸಾಮಾನ್ಯರ ವೇದಿಕೆಯ ಸಂಚಾಲಕ ಯಲ್ಲಪ್ಪ ಹೆಗಡೆ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನರ ಹಕ್ಕೋತ್ತಾಯಗಳ ಚಳುವಳಿಗಾಗಿ ಡಿ.1ರಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಶ್ರೀನಗರದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದವರಿಗೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಲಿದೆ ಎಂದರು.

ಕರ್ನಾಟಕ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆ ಭರ್ತಿ ಮಾಡುವುದು. ಉದ್ಯೋಗ ಆಕಾಂಕ್ಷಿಗಳಿಗೆ ಕನಿಷ್ಠ ಆರು ವರ್ಷಗಳ ಕಾಲ ವಯೋಮಿತಿ ಸಡಿಲಿಕೆ, ಕೆಪಿಎಸ್‌ಸಿ, ಕೆಇಎ, ಕೆಎಸ್ಪಿ ಹಾಗೂ ಶಿಕ್ಷಣ ಇಲಾಖೆಯ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಭರ್ತಿ ಮಾಡಬೇಕು. ಯುಪಿಎಸ್‌ಸಿ, ಸಿಎಸ್ಇ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಕೂಡ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ, ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ವಿವಿಧ ಕನ್ನಡ ಪರ ಸಂಘಟನೆಗಳು, ರೈತರು, ವಿದ್ಯಾರ್ಥಿಗಳು, ಯುವ ಜನರು ಬೆಂಬಲ ವ್ಯಕ್ತಪಡಿಸಲಿದ್ದಾರೆಂದರು.

ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾ ಮೇಗೌಡ) ಬಣದ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಸಂಘಟನೆಯು ಸದಾ ಬೆಂಬಲ ನೀಡುತ್ತಿದೆ. ನೇಮಕಾತಿಯನ್ನು ಸರ್ಕಾರ ತಕ್ಷಣವೇ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಸರ್ಕಾರ ಯಾವುದೇ ಒಂದು ನೇಮಕಾತಿ ಮಾಡದೇ ಕಾಲಹರಣ ಮಾಡುತ್ತಿದ್ದು, ಸರ್ಕಾರ ನಡೆಸಲು ಯೋಗ್ಯತೆ ಇಲ್ಲವೆಂದು ಆರೋಪಿಸಿ, ಎಲ್ಲ ರೈತ ಸಂಘಟನೆ ಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಪವಾರ್, ಶೇಖರ ಕಾಂಬಳೆ, ರಾಜಭಕ್ಷ ಜಮಾದಾರ ಇದ್ದರು.