ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು? ಒಬಿಸಿಗೋ? ಲಿಂಗಾಯತ ಸಮುದಾಯಕ್ಕೋ? ಇಂತಹದೊಂದು ಪ್ರಶ್ನೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹೇಗಾದರೂ ಮಾಡಿ ಈ ಸಲ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು.ಅದಕ್ಕಾಗಿ ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಬಯಕೆ ಪಕ್ಷದ್ದು. ಇದರೊಂದಿಗೆ ಪಕ್ಷದ ಮೂಲ ಸಿದ್ಧಾಂತ, ಸಾಮಾಜಿಕ ನ್ಯಾಯಕ್ಕೂ ಧಕ್ಕೆಯುಂಟಾಗಬಾರದು. ಆ ರೀತಿ ನಿಭಾಯಿಸುವುದು ಎಂಬ ಲೆಕ್ಕಾಚಾರ ಪಕ್ಷದ ವರಿಷ್ಠರು ಮಾಡುತ್ತಿದ್ದಾರೆ. ಅಖಂಡ ಧಾರವಾಡ ಜಿಲ್ಲೆ ಎಂದರೆ ಹಾವೇರಿ, ಗದಗ, ಧಾರವಾಡ ಮೂರು ಜಿಲ್ಲೆಗಳು ಸೇರಿಕೊಳ್ಳುತ್ತವೆ. ಸಹಜವಾಗಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಒಬಿಸಿ ಕೊಟ್ಟರೆ, ಇಲ್ಲಿ ಲಿಂಗಾಯತ ಸೇರಿದಂತೆ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಪಕ್ಷ. ಅದರಂತೆ ಕಳೆದ ಚುನಾವಣೆವರೆಗೂ ಹಾವೇರಿಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಹಾವೇರಿಗೆ ರೆಡ್ಡಿ ಸಮುದಾಯಕ್ಕೆ ನೀಡಿದ್ದರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿತ್ತು.
ಈ ಸಲ ಹೇಗೆ?:ಸದ್ಯ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಆನಂದಸ್ವಾಮಿ ಗಡ್ಡದೇವರಮಠರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಿಂದಾಗಿ ಧಾರವಾಡಕ್ಕೆ ಒಬಿಸಿಗೆ ಟಿಕೆಟ್ ಕೊಡಬೇಕು. ಅಂದರೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಅಥವಾ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಮುಸ್ಲಿಂ ಸಮುದಾಯಕ್ಕೆ ನೀಡಿದರೆ ಚುನಾವಣೆ ಪಕ್ಕಾ ಒಂದು ಸೈಡ್ ಆದಂತಾಗುತ್ತದೆ. ಆಗ ಸಹಜವಾಗಿ ಬಿಜೆಪಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆಯೂ ಉಂಟು. ಈ ಹಿನ್ನೆಲೆಯಿಂದಲೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಶಾಕೀರ ಸನದಿ ಅವರಿಗೆ ಹುಡಾ ಅಧ್ಯಕ್ಷಗಿರಿ ನೀಡಿ ಸಮಾಧಾನ ಪಡಿಸಲಾಗಿದೆ. ಈ ಮೂಲಕ ಟಿಕೆಟ್ ಕೊಡುವುದು ಡೌಟು ಎಂದೇ ಹೇಳಲಾಗುತ್ತಿದೆ. ಇನ್ನು ಒಬಿಸಿ ಪಟ್ಟಿಯಲ್ಲಿ ಸೇರುವ ವಿನೋದ ಅಸೂಟಿಗೂ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷಗಿರಿ ನೀಡಿ ಅವರನ್ನು ಸಮಾಧಾನ ಪಡಿಸಲಾಗಿದೆ. ಆದರೂ ಒಬಿಸಿಗೆ ಟಿಕೆಟ್ ನೀಡಿದರೆ ವಿನೋದ ಅಸೂಟಿ ಹಾಗೂ ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದ ಡಿ.ಕೆ. ನಾಯ್ಕರ ಪುತ್ರ ಲೋಹಿತ ನಾಯ್ಕರ ಹೆಸರು ಮುನ್ನೆಲೆಗೆ ಬಂದಿದೆ.
ಒಬಿಸಿ ಬದಲು ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ನೀಡಿದರೆ ಉತ್ತಮ. ಲಿಂಗಾಯತರ ಬೆಂಬಲವೂ ಸಿಗಬಹುದು ಎಂಬ ಲೆಕ್ಕಾಚಾರವುಂಟು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಳಿಯ ರಜತ್ ಉಳ್ಳಾಗಡ್ಡಿಮಠ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ಇವರಲ್ಲಿ ಲಿಂಬಿಕಾಯಿ ಹೆಸರು ಕೊಂಚ ಮುಂಚೂಣಿಯಲ್ಲಿದೆ.ಕಳೆದ 1996ರಿಂದ ನಡೆದ 7 ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲ. ಮೂರು ಬಾರಿ ಬಿಜೆಪಿಯಿಂದ ವಿಜಯ ಸಂಕೇಶ್ವರ ಗೆದ್ದಿದ್ದರೆ, ನಂತರದ ನಾಲ್ಕು ಚುನಾವಣೆಯಲ್ಲಿ ಪ್ರಹ್ಲಾದ ಜೋಶಿ ಗೆಲುವು ಕಂಡಿದ್ದಾರೆ. ಅಂದರೆ ಏಳು ಚುನಾವಣೆಯಿಂದಲೂ ಬಿಜೆಪಿಯದ್ದೇ ಪಾರುಪತ್ಯ ಆಗಿದೆ. ಈ ಸಲವೂ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಅವರೇ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಈ ಹಿನ್ನೆಲೆಯಲ್ಲಿ ಜೋಶಿ ಅವರ ಐದನೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಂತಹ ಸಾಮರ್ಥ್ಯ ಇರುವ ಅಭ್ಯರ್ಥಿಯನ್ನು ಅಳೆದು ತೂಗಿ ಹಾಕಲು ನಿರ್ಧರಿಸಿದ್ದು, ಒಟ್ಟಿನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಭಾರೀ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.