ಸಾರಾಂಶ
ಧಾರವಾಡ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಹೆಸರಿಗೆ ತಕ್ಕಂತೆ ವಿದ್ಯಾಕಾಶಿ ಮಾಡುವ ಪ್ರಯತ್ನವನ್ನು ಜಿಲ್ಲಾಡಳಿತ ಆರಂಭಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು, ಪರೀಕ್ಷಾ ತರಬೇತಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೊಡಿಸಿದ್ದು ಎಲ್ಲರ ಸಹಕಾರ, ಪ್ರಯತ್ನದಿಂದ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ವಿದ್ಯಾಕಾಶಿ ಮಾಡುವತ್ತ ಧಾರವಾಡ ಜಿಲ್ಲಾಡಳಿತದ ಚಿತ್ತ ಸಂಕಲ್ಪದೊಂದಿಗೆ ಹಿರಿಯ ಶಿಕ್ಷಣ ತಜ್ಞರು, ಖಾಸಗಿ ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪರೀಕ್ಷೆ ಫಲಿತಾಂಶ ಕುರಿತು ಸಮಾಲೋಚನೆ ಹಾಗೂ ಕ್ರಿಯಾಯೋಜನೆ ರೂಪಿಸಲು ಗುರುವಾರ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ವರ್ಷ 10ನೇ ತರಗತಿಗೆ ದಾಖಲಾಗಿರುವ ಮಕ್ಕಳಲ್ಲಿನ ಕಲಿಕೆಯ ಗತಿ ಗುರುತಿಸಲು ಸೇತು ಬಂಧು ಕಾರ್ಯಕ್ರಮದಡಿ ಪರೀಕ್ಷೆ ಜರುಗಿಸಲಾಗಿತ್ತು. 33 ಸಾವಿರ ವಿದ್ಯಾರ್ಥಿಗಳ ಪೈಕಿ 8,237 ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದಾರೆ. ಈ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ, ಅವರನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಸುಧಾರಿಸಿ ಈ ಸಲದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಸವಾಲಿದೆ ಎಂದು ಹೇಳಿದರು.ಮಕ್ಕಳಲ್ಲಿ ಓದುವ ಭರವಸೆ ಮೂಡಿಸುವ ಅಗತ್ಯವಿದೆ. ಓದಿನಲ್ಲಿ ಮಕ್ಕಳು ಹಿಂದುಳಿಯಲು ಶಿಕ್ಷಕರು ಮಾತ್ರ ಕಾರಣರಲ್ಲ, ಅದರ ಹೊಣೆಯನ್ನು ಪಾಲಕರು ಸೇರಿದಂತೆ ಎಲ್ಲರೂ ವಹಿಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು, ಅವರ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಕಲಿಕೆಯಲ್ಲಿ ನಿಧಾನಗತಿಯ ಮಕ್ಕಳನ್ನು ಗುರುತಿಸಿ ಎರಡ್ಮೂರು ಜನರಿಗೆ ಓರ್ವ ಶಿಕ್ಷಕರನ್ನು ಮತ್ತು ಅಂತಹ ಒಂದು ಶಾಲೆಗೆ ಓರ್ವ ನೊಡಲ್ ಅಧಿಕಾರಿ ನೇಮಿಸಲು ಕ್ರಮವಹಿಸಲಾಗುತ್ತದೆ. ನಿಧಾನಗತಿಯ ಮಕ್ಕಳಲ್ಲಿನ ಓದು, ಬರಹದಲ್ಲಿ ಬದಲಾವಣೆ ತರುವ, ಉತ್ತಮ ಪ್ರಗತಿ ಸಾಧಿಸುವ ಶಿಕ್ಷಕರಿಗೆ ಬೆಸ್ಟ್ ಟೀಚರ್ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಧಾರವಾಡ ಐಐಟಿ ಡೀನ್ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಫಲಿತಾಂಶ ಸುಧಾರಣೆಗೆ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ತರಬೇತಿ ಮೂಲಕ ಓದು, ಕಲಿಕೆಯ ಕೌಶಲ್ಯ ಬೆಳೆಸಬೇಕು. ಯೋಜನಾ ಬದ್ಧವಾಗಿ ವಿವಿಧ ಸಮಿತಿ ರಚಿಸಿಕೊಂಡು ಕಾರ್ಯಸಾಧನೆ ಮಾಡಬಹುದು ಎಂದರು.ತರಬೇತಿ ತಜ್ಞ ಮಹೇಶ ಮಾಶ್ಯಾಳ, ವಿದ್ಯಾರ್ಥಿಗಳಿಗೆ ಹೆಚ್ಚು ಪೋಕಸ್ ಮಾಡುವ ಮೂಲಕ ವಿಶೇಷ ತರಗತಿ ಮಾಡಬೇಕು. ಶಿಕ್ಷಕರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದರು. ಶಿಕ್ಷಣ ತಜ್ಞ ವಿನಾಯಕ ಜೋಶಿ, ಬಸವರಾಜ ಪಾಟೀಲ, ಡಿಡಿಪಿಯು ಸುರೇಶ ಕೆ.ಪಿ, ಡಿಡಿಪಿಐ ಎಸ್.ಎಸ್. ಕೆಳದಿಮಠ ಸೇರಿದಂತೆ ಶಿಕ್ಷಣಾಧಿಕಾರಿಗಳು ಇದ್ದರು. ‘ಡಿಸಿ ವಿತ್ ಡೆ..
ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ, ಆತ್ಮಸ್ಥೈರ್ಯ, ಸಾಧನೆ ಛಲ ಮತ್ತು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ, ಹುಮ್ಮಸ್ಸು ಮೂಡಿಸಲು ಡಿಸಿ ವಿತ್ ಡೆ- ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ವಿಶೇಷ ಕಾರ್ಯಕ್ರಮ ಆಗಸ್ಟ್ ತಿಂಗಳಿಂದ ಪ್ರತಿ ತಿಂಗಳು ಆಯೋಜಿಸಲು ನಿರ್ಧರಿಸಲಾಗಿದೆ. 10ನೇ ತರಗತಿಯ 10, ಪಿಯುಸಿ ದ್ವಿತೀಯ ವಿಭಾಗದಲ್ಲಿ ಓದುತ್ತಿರುವ 10 ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಅವರೊಂದಿಗೆ ಜಿಲ್ಲಾಧಿಕಾರಿ ಸಾಧನೆ, ಶಿಕ್ಷಣ, ಪಠ್ಯೇತರ ಚಟುವಟಿಕೆಗಳ ಕುರಿತು ಸಂವಾದ ನಡೆಸಿ, ತಮ್ಮ ಮನೆಯಲ್ಲಿಯೇ ಅವರೊಂದಿಗೆ ಊಟ ಮಾಡುತ್ತಾರೆ. ವಿಶೇಷ ಸಾಧಕ ಅತಿಥಿಗಳನ್ನು ಆಹ್ವಾನಿಸಿ, ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವರ ಸಾಧನೆಗೆ ಪ್ರೇರಣೆ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ಕಚೇರಿ ಭೇಟಿ, ಗ್ರೂಪ್ ಫೋಟೊದೊಂದಿಗೆ ವಿದ್ಯಾರ್ಥಿಗಳಿಗೆ ಅಂದಿನ, ಡಿಸಿ ವಿತ್ ಡೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ, ಓದಿನಲ್ಲಿ ಆಸಕ್ತಿ, ಸಾಧನೆ, ಛಲ ಮೂಡಿಸಲು ಜಿಲ್ಲಾಡಳಿತ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.