ಸಾರಾಂಶ
ಸಮ್ಮೇಳನದಲ್ಲಿ ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜಿಲ್ಲೆಯ ಖ್ಯಾತ ಸಾಹಿತಿಗಳು, ಬರಹಗಾರರು, ಚಿಂತಕರು, ಪತ್ರಕರ್ತರು ಭಾಗವಹಿಸಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಧಾರವಾಡ
ಇದೇ ಮಾ. 6 ಹಾಗೂ 7ರಂದು ಧಾರವಾಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೆಎಸ್ಸೆಸ್ ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಹಿರಿಯ ವಿಮರ್ಶಕ ಡಾ. ಕೆ.ಎಸ್. ಶರ್ಮಾ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಾ.6ರ ಬುಧವಾರ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, 9ಕ್ಕೆ ಕನ್ನಡಕ್ಕಾಗಿ ನಡಿಗೆ ನಡೆಯಲಿದ್ದು, 10.30ಕ್ಕೆ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಂದ ಉದ್ಘಾಟನೆ ನೆರವೇರಲಿದೆ ಎಂದರು.
ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜಿಲ್ಲೆಯ ಖ್ಯಾತ ಸಾಹಿತಿಗಳು, ಬರಹಗಾರರು, ಚಿಂತಕರು, ಪತ್ರಕರ್ತರು ಭಾಗವಹಿಸಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಮಾ. 6ರ ಬುಧವಾರ ಮಧ್ಯಾಹ್ನ 2ಕ್ಕೆ ಡಾ. ರಾಘವೇಂದ್ರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಚಿಂತನೆ ನಡೆಯಲಿದ್ದು, ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ಸೃಜನಶೀಲತೆ ಕುರಿತು ಡಾ. ಅರವಿಂದ ಯಾಳಗಿ, ಜನಪದ ಸಾಹಿತ್ಯದಲ್ಲಿ ಬಂಡಾಯದ ನೆಲೆಗಳು ಕುರಿತು ಡಾ. ವೈ.ಎಂ. ಭಜಂತ್ರಿ ಮಾತನಾಡುತ್ತಾರೆ. ನಂತರ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆಯಲ್ಲಿ ಬೇಂದ್ರೆ ಸಾಹಿತ್ಯದ ಒಳನೋಟಗಳು ಗೋಷ್ಠಿಯಲ್ಲಿ ಬೇಂದ್ರೆ ಕಾವ್ಯದಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ಡಾ. ಕೆ.ಆರ್. ದುರ್ಗಾದಾಸ, ಬೇಂದ್ರೆ ಕಲಾಯೋಗ ಕುರಿತು ಸುರೇಶ ಕುಲಕರ್ಣಿ ಮಾತನಾಡುತ್ತಾರೆ. ಸಂಜೆ 5ಕ್ಕೆ ಡಾ. ರಾಜನ್ ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆಯುವ ಇಂದಿನ ಯುವಕರ ಹವ್ಯಾಸಗಳು-ವ್ಯಕ್ತಿತ್ವ ಗೋಷ್ಠಿಯಲ್ಲಿ ಡಾ. ಆನಂದ ಪಾಂಡುರಂಗಿ ಉಪನ್ಯಾಸ ನೀಡುವರು. ತದ ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಡಾ. ಅಂಗಡಿ ತಿಳಿಸಿದರು.2ನೇ ದಿನದ ಗೋಷ್ಠಿಗಳು
ಮಾ. 7ರ ಗುರುವಾರ ಬೆಳಗಿನ 10ಕ್ಕೆ ಮೊದಲ ಗೋಷ್ಠಿಯಲ್ಲಿ ಡಾ. ಜಯಶ್ರೀ ಶಿವಾನಂದ ಅಧ್ಯಕ್ಷತೆಯಲ್ಲಿ ಮಹಿಳಾ ಸಂವೇದನೆ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನಗಳ ಕುರಿತು ಡಾ. ವಿನಯಾ ವಕ್ಕುಂದ ಹಾಗೂ ಮಹಿಳೆಯರ ರಕ್ಷಣೆಯಲ್ಲಿ ಸಮಾಜದ ಹೊಣೆಗಾರಿಕೆ ವಿಷಯವಾಗಿ ಡಾ.ವೀಣಾ ಯಲಿಗಾರ ಮಾತನಾಡುತ್ತಾರೆ. ಮಧ್ಯಾಹ್ನ 12ಕ್ಕೆ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆಯಲ್ಲಿ ಮಾನವ ಹಕ್ಕುಗಳು ಮತ್ತು ಸಂವಿಧಾನ ವಿಷಯವಾಗಿ ಸುರೇಶ ಒಂಟಗೋಡಿ ಮಾತನಾಡುತ್ತಾರೆ. ಮಧ್ಯಾಹ್ನ ಊಟದ ನಂತರ 2.30ಕ್ಕೆ ಮರೆಯಲಾಗದ ಕವಿಗಳ ನೆನಪು ಗೋಷ್ಠಿಯಲ್ಲಿ ಹಿರಿಯ ಕವಿಗಳ ಕವನಗಳನ್ನು ಕವಿಗಳು ವಾಚಿಸಲಿದ್ದಾರೆ ಎಂದರು.ಮಧ್ಯಾಹ್ನ 3.30ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದದಲ್ಲಿ ಮೋಹನ ಲಿಂಬಿಕಾಯಿ, ಡಾ. ಶಿವಾನಂದ ಶೆಟ್ಟರ್, ಪ್ರಕಾಶ ಉಡಿಕೇರಿ, ಮೋಹನ ಸಿದ್ದಾಂತಿ, ವಿ.ಎಂ. ಶಿಲವಂತರ ಹಾಗೂ ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಮಲ್ಲಿಕಾರ್ಜು ಸಿದ್ದಣ್ಣವರ, ಬಂಡು ಕುಲಕರ್ಣಿ ಹಾಗೂ ರಾಹುಲ್ ಬೆಳಗಲಿ ಭಾಗವಹಿಸುತ್ತಾರೆ. ಸಂಜೆ 4.30ಕ್ಕೆ ಬಹಿರಂಗ ಸಭೆ ನಡೆಯಲಿದೆ. ನಂತರ ಸಮಾರೋಪ ಭಾಷಣ ಚಿಂತಕ ಡಾ. ಸಿದ್ದನಗೌಡ ಪಾಟೀಲ ಮಾಡಲಿದ್ದಾರೆ. ಎರಡು ದಿನಗಳ ಕಾಲ ಭಾಗವಹಿಸುವ ಪಿಯು ಕಾಲೇಜುಗಳ ಶಿಕ್ಷಕರು, ಸಿಬ್ಬಂದಿಗೆ ಅನ್ಯಕಾರ್ಯ ನಿಮಿತ್ತ ಮಂಜೂರಾತಿ ಮಾಡಲಾಗಿದೆ ಎಂದು ಡಾ. ಅಂಗಡಿ ತಿಳಿಸಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಬಿಡುಗಡೆ ಮಾಡಿದರು. ಮಹಾಂತೇಶ ನರೇಗಲ್, ಡಾ.ಜಿನದತ್ತ ಹಡಗಲಿ, ಡಾ.ಎಸ್.ಎಸ್. ದೊಡಮನಿ ಹಾಗೂ ಮಾರ್ತಾಂಡಪ್ಪ ಕತ್ತಿ ಇದ್ದರು.