ಅಂತಾರಾಷ್ಟ್ರೀಯ ಲಾನ್‌ ಟೆನಿಸ್‌ ಪಂದ್ಯಾವಳಿಗೆ ಧಾರವಾಡ ಸಜ್ಜು

| Published : Oct 14 2023, 01:01 AM IST

ಸಾರಾಂಶ

17 ವರ್ಷಗಳ ನಂತರ ಅಂತಾರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಗೆ ಇಲ್ಲಿಯ ರಾಜಾಧ್ಯಕ್ಷ ಪೆವಿಲಿಯನ್‌ ಆವರಣದಲ್ಲಿರುವ ಐದು ಹಾರ್ಡ್‌ ಕೋರ್ಟ್‌ ಅಂಗಣಗಳು ಸಾಕ್ಷಿಯಾಗಲಿದ್ದು, 20 ರಾಷ್ಟ್ರಗಳಿಂದ 44 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ನ ವಿಶ್ವ ಟೆನಿಸ್‌ ಟೂರ್‌ (ಡಾಲರ್‌ 25 ಸಾವಿರ ಬಹುಮಾನ ಮೊತ್ತದ) ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ಟೆನಿಸ್‌ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ಅ. 15 ರಿಂದ 22ರ ವರೆಗೆ ನಡೆಯಲಿದ್ದು, ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

17 ವರ್ಷಗಳ ನಂತರ ಅಂತಾರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಗೆ ಇಲ್ಲಿಯ ರಾಜಾಧ್ಯಕ್ಷ ಪೆವಿಲಿಯನ್‌ ಆವರಣದಲ್ಲಿರುವ ಐದು ಹಾರ್ಡ್‌ ಕೋರ್ಟ್‌ ಅಂಗಣಗಳು ಸಾಕ್ಷಿಯಾಗಲಿದ್ದು, 20 ರಾಷ್ಟ್ರಗಳಿಂದ 44 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಭಾರತದ ಡೇವಿಸ್‌ ಕಪ್‌ ಆಟಗಾರರು ಹಾಗೂ ಏಷ್ಯನ್‌ ಗೇಮ್ಸ್‌ನ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ರಾಮಕುಮಾರ ರಾಮನಾಥನ್‌, ದಿಗ್ವಿಜಯಸಿಂಗ್‌ ಪ್ರತಾಪಸಿಂಗ ಸೇರಿದಂತೆ 12 ಭಾರತೀಯ ಆಟಗಾರರು ಇದ್ದಾರೆ. ಭಾರತ, ಅಮೇರಿಕಾ, ಫ್ರಾನ್ಸ್‌, ಜಪಾನ, ಮಲೇಶಿಯಾ, ನೆದರಲ್ಯಾಂಡ್‌, ಕೋರಿಯಾ, ಸ್ವೀಡನ್‌, ಗ್ರೇಟ್‌ ಬ್ರಿಟನ್‌, ಇಟಲಿ, ವಿಯಟ್ನಾಂ, ಆಸ್ಟ್ರೇಲಿಯಾ, ನೇಪಾಳ, ಸ್ವೀಜರಲ್ಯಾಂಡ್, ತೈಪೇ, ಅರ್ಜೆಂಟಿನಾ, ಉಕ್ರೇನ್‌, ಜರ್ಮನಿ, ಇರಾಕ ಮತ್ತು ಕೆಮರೂನ್ ರಾಷ್ಟ್ರಗಳ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

ಯಾವಾಗ ಯಾವ ಆಟಗಳು

ಪಂದ್ಯಾವಳಿಯಲ್ಲಿ ಒಟ್ಟು 32 ಸಿಂಗಲ್ಸ್‌ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು 32 ಮೇನ್‌ ಡ್ರಾ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಅಕ್ಟೋಬರ್‌ 15, 16ರಂದು ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಭಾರತದ 18 ಸೇರಿದಂತೆ ಒಟ್ಟು 27 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಡ್ರಾ ಪಂದ್ಯಗಳು ಅಕ್ಟೋಬರ್‌ 17 ರಿಂದ ನಡೆಯಲಿವೆ.

ಡಬಲ್ಸ್‌ ಪಂದ್ಯಗಳಲ್ಲಿ ನೇರವಾಗಿ ಮೇನ್‌ ಡ್ರಾ ಇರುತ್ತವೆ. 16 ಜೋಡಿಗಳು ಡಬಲ್ಸ್‌ ನಲ್ಲಿ ಭಾಗವಹಿಸುತ್ತವೆ. ಪ್ರತಿ ಪಂದ್ಯ ಬೆಸ್ಟ್‌ ಆಫ್‌ ಫೈವ್‌ ಸೆಟ್ಸ್‌ ಇರಲಿದೆ. ಅಂತಿಮ ಪಂದ್ಯಗಳು ಡಬಲ್ಸ್‌ ಹಾಗೂ ಸಿಂಗಲ್ಸ್‌ ಕ್ರಮವಾಗಿ ಅ. 21 ಹಾಗೂ 22ರಂದು ನಡೆಯಲಿವೆ. ಜಿ.ಆರ್‌. ಅಮರನಾಥ ಪಂದ್ಯಾವಳಿಯ ನಿರ್ದೇಶಕರಾಗಿದ್ದು, ಐಟಿಎಫ್‌ ಮತ್ತು ಕೆಎಸ್‌ಎಲ್‌ಟಿಎ ಉಸ್ತುವಾರಿಯಲ್ಲಿ ಪಂದ್ಯಾವಳಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದರು.

ಡಿಡಿಎಲ್‌ಟಿಎ ನಡೆದು ಬಂದ ದಾರಿ..

ಧಾರವಾಡ ಜಿಲ್ಲಾ ಲಾನ್‌ ಟೆನಿಸ್‌ ಸಂಸ್ಥೆ ಮತ್ತು ರಾಜಾಧ್ಯಕ್ಷ ಪೆವಿಲಿಯನ್‌ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಈ ಆವರಣದಲ್ಲಿ ತಮ್ಮ ಬಾಲ್ಯವನ್ನು ಟೆನಿಸ್‌ ಆಡುತ್ತಾ ಕಳೆದಿರುವ ಅನೇಕ ಹಿರಿಯರು ಅತ್ಯಂತ ಅಭಿಮಾನದಿಂದ ಈ ಸಂಸ್ಥೆಯೊಡನೆ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾರೆ. ಆಗ, ನ್ಯಾಯಾಧೀಶರಾಗಿದ್ದ ನ್ಯಾ. ರಾಜಾಧ್ಯಕ್ಷ ಧಾರವಾಡದಲ್ಲಿ ಒಂದು ಉತ್ತಮ ಟೆನಿಸ್‌ ಸಂಕೀರ್ಣ ನಿರ್ಮಿಸಬೇಕೆಂಬ ಕನಸು ಹೊತ್ತಿದ್ದರು. ಈ ಕನಸು 1937ರಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಜವಾಯಿತು.

ಸ್ಥಾಪನೆಯಾದ ಮರು ವರ್ಷವೇ ಈ ಆವರಣದ ಕೋರ್ಟ್‌ಗಳಲ್ಲಿ ಆಗಿನ ವಿಶ್ವದ ಕ್ರಮವಾಗಿ ನಂ. 1, ನಂ. 2 ಆಟಗಾರರಾಗಿದ್ದ ಬಿಲ್‌ ಟಿಲ್ಡನ್‌ ಮತ್ತು ಹೆನ್ರಿ ಕೋಶೆ ಆಟವಾಡಿದ್ದು ಹೆಮ್ಮೆಯ ಸಂಗತಿ.

ಏನೇನು ಸೌಲಭ್ಯ

86 ವಸಂತಗಳನ್ನು ಕಂಡಿರುವ ರಾಜಾಧ್ಯಕ್ಷ ಪೆವಿಲಿಯನ್‌ ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳಾಗಿದ್ದ ಡಿ.ಡಿ. ಸಾಠೆ, ಬಿ.ಆರ್‌. ಅಗವಾನೆ, ಕಪಿಲ ಮೋಹನ, ಗೌರವಗುಪ್ತಾ, ಎಂ.ಎಸ್‌. ಶ್ರೀಕರ, ರಾಜೇಂದ್ರ ಚೋಳನ್‌, ದೀಪಾ ಚೋಳನ್‌ ಹಾಗೂ ಈಗಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಬೆಂಬಲ ಮತ್ತು ಪರಿಶ್ರಮದಿಂದ ನೂತನ ಸೌಲಭ್ಯಗಳನ್ನು ಹೊಂದಿದೆ. ಈಗಾಗಲೇ ಎರಡು ಅಂತಾರಾಷ್ಟ್ರೀಯ ಎಟಿಪಿ ಪಂದ್ಯಾವಳಿಗಳನ್ನು ಸಂಘಟಿಸಿರುವ ಡಿಡಿಎಲ್‌ಟಿಎ ಆವರಣ ಈಗ ಐದು ಸುಸಜ್ಜಿತ ಸಿಂಥೆಟಿಕ್‌ ಕೋರ್ಟ್‌, ಹೊನಲು ಬೆಳಕು, ಜಿಮ್, ಆಟಗಾರರ ಡ್ರೆಸ್ಸಿಂಗ್‌ ರೂಂ, ಕ್ಲಬ್‌ ಹೌಸ್‌ ಇತ್ಯಾದಿ ಅತ್ಯಾಧುನಿಕ ಸೌಕರ್ಯಗಳಿಂದ ಸುಸಜ್ಜಿತವಾಗಿದ್ದು ಕ್ರೀಡಾ ಪ್ರೇಮಿಗಳಿಗೆ ಐಟಿಎಫ್‌ ಪಂದ್ಯಾವಳಿ ಶ್ರೇಷ್ಠ ಟೆನಿಸ್‌ ರಸದೌತಣ ನೀಡಲು ಸಿದ್ಧವಾಗಿದೆ.