ಫೆ. 3, 4ರಂದು ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ

| Published : Feb 01 2025, 12:00 AM IST

ಸಾರಾಂಶ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಫೆ. 3 ಹಾಗೂ 4ರಂದು ಧಾರವಾಡ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಹಿರಿಯ ಗಂಥಪಾಲಕ, ಸಾಹಿತಿ ಡಾ. ಎಸ್‌.ಆರ್‌. ಗುಂಜಾಳ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಧಾರವಾಡ:

ಹಿರಿಯ ಗಂಥಪಾಲಕ, ಸಾಹಿತಿ ಡಾ. ಎಸ್‌.ಆರ್‌. ಗುಂಜಾಳ ಸರ್ವಾಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 3 ಮತ್ತು 4ರಂದು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಫೆ. 3ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ರಾಷ್ಟ್ರ ಧ್ವಜಾರೋಹಣ, ಬಸವಪ್ರಭು ಹೊಸಕೇರಿ ಅವರಿಂದ ಕನ್ನಡ ಧ್ವಜಾರೋಹಣ ಹಾಗೂ ತಾವು ಪರಿಷತ್ ಧ್ವಜಾರೋಹಣ ನೆರವೇರಿಸುತ್ತೇವೆ. ನಂತರ ಕನ್ನಡಕ್ಕಾಗಿ ನಡಿಗೆಗೆ ಡಿಡಿಪಿಐ ಎಸ್.ಎಸ್. ಕೆಳದಿಮಠ ಚಾಲನೆ ನೀಡುವರು ಎಂದರು.

ರುಮಾಲೆ ಚಾಲನೆ:

ಬೆಳಗ್ಗೆ10.30ಕ್ಕೆ ಸಾಹಿತಿ ಡಾ. ಮೃತ್ಯುಂಜಯ ರುಮಾಲೆ ಸಮ್ಮೇಳನಕ್ಕೆ ಚಾಲನೆ ನೀಡುವರು. ಸರ್ವಾಧ್ಯಕ್ಷರ ಸಾಹಿತ್ಯ ಪ್ರದರ್ಶನವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಡಾ. ಮಹೇಶ ಜೋಶಿ ಪುಸ್ತಕ ಬಿಡುಗಡೆ ಮಾಡುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಆಶಯ ನುಡಿಗಳನ್ನಾಡುವರು. ಉಸ್ತುವಾರಿ ಸಚಿವ ಸಂತೋಷ ಲಾಡ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕೆ.ಎಸ್. ಶರ್ಮಾ ಆಗಮಿಸುವರು. ಊಟದ ನಂತರ ಮಧ್ಯಾಹ್ನ 2ಕ್ಕೆ ಪ್ರೊ. ದುಷ್ಯಂತ ನಾಡಗೌಡ ಅಧ್ಯಕ್ಷತೆಯಲ್ಲಿ ಸಾಹಿತ್ಯ ಚಿಂತನ ಗೋಷ್ಠಿ, ಸಂಜೆ 4ಕ್ಕೆ ಎಸ್‌.ಎಚ್‌. ಮಿಟ್ಟಲಕೋಡ ಅಧ್ಯಕ್ಷತೆಯಲ್ಲಿ ಅವಲೋಕನ ಗೋಷ್ಠಿಗಳು ನಡೆಯಲಿದ್ದು, ವಿವಿಧ ವಿಷಯಗಳ ಕುರಿತು ಸಾಹಿತಿಗಳು, ವಿಷಯ ತಜ್ಞರು ವಿಷಯ ಮಂಡಿಸಲಿದ್ದಾರೆ. ಸಂಜೆ 6.30ಕ್ಕೆ ರಾಜು ತಾಳಿಕೋಟಿ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

2ನೇ ದಿನದ ಕಾರ್ಯಕ್ರಮ:

ಫೆ. 4ರಂದು ಬೆಳಗ್ಗೆ 9.30ಕ್ಕೆ ಹಿರಿಯ ಕವಿ ಪುಟ್ಟು ಕುಲಕರ್ಣಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಮಧ್ಯಾಹ್ನ 12ಕ್ಕೆ ಮೋಹನ ಹೆಗಡೆ ಅಧ್ಯಕ್ಷತೆಯಲ್ಲಿ ವರ್ತಮಾನ ಗೋಷ್ಠಿ ಹಾಗೂ ಮಧ್ಯಾಹ್ನ 2ಕ್ಕೆ ಸಿ.ಯು. ಬೆಳ್ಳಕ್ಕಿ ಅಧ್ಯಕ್ಷತೆಯಲ್ಲಿ ನಮ್ಮವರು ಗೋಷ್ಠಿ ನಡೆಯಲಿವೆ. ಸಂಜೆ 4ಕ್ಕೆ ಸರ್ವಾಧ್ಯಕ್ಷರೊಂದಿಗೆ ಮಾತು ಗೋಷ್ಠಿಯಲ್ಲಿ ಚಿಂತಕರು ಸಂವಾದ ನಡೆಸಲಿದ್ದಾರೆ. ಸಂಜೆ 5.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 6.30ಕ್ಕೆ ಡಾ. ವೀರಣ್ಣ ರಾಜೂರ ಸಮಾರೋಪ ನುಡಿಗಳನ್ನಾಡುವರು. ಡಾ.ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸುವರು ಎಂದರು.

5 ಲಕ್ಷ ಅನುದಾನ:

ಜಿಲ್ಲಾ ಸಮ್ಮೇಳಕ್ಕೆ ಕೇಂದ್ರ ಪರಿಷತ್ ₹ 5 ಲಕ್ಷ ಅನುದಾನ ಹಾಗೂ ಹು-ಧಾ ಮಹಾನಗರ ಪಾಲಿಕೆ ₹ 1 ಲಕ್ಷ ನೀಡುವ ಭರವಸೆ ನೀಡಿವೆ. ಇದಲ್ಲದೆ ಪಾಲಿಕೆಯು ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕು ಸಮ್ಮೇಳನಗಳಿಗೆ ತಲಾ ₹ 50 ಸಾವಿರ ಅನುದಾನ ನೀಡುವ ಭರವಸೆ ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿದ್ದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಶಂಕರ ಕುಂಬಿ, ಶಂಕರ ಹಲಗತ್ತಿ, ಡಾ. ಜಿನದತ್ತ ಹಡಗಲಿ, ಮಹಾಂತೇಶ ನರೇಗಲ್‌, ಮರ್ತಾಂಡಪ್ಪ ಕತ್ತಿ, ಕೆ.ಎಸ್. ಕೌಜಲಗಿ, ಎನ್‌.ಆರ್. ಬಾಳಿಕಾಯಿ ಇದ್ದರು.