ಧಾರವಾಡ ಹಾಲು ಒಕ್ಕೂಟದಿಂದ ಪ್ರತಿ ದಿನ 1.90 ಲಕ್ಷ ಲೀಟರ್ ಹಾಲು ಶೇಖರಣೆ

| Published : Feb 02 2025, 01:01 AM IST

ಸಾರಾಂಶ

ಕರ್ನಾಟಕದಲ್ಲಿರುವ 15 ಒಕ್ಕೂಟಗಳಲ್ಲಿ ಹಾವೇರಿ ಒಕ್ಕೂಟ ಸೇರಿ 16 ಒಕ್ಕೂಟಗಳಾಗಿವೆ. ನಮ್ಮ ಧಾರವಾಡ ಒಕ್ಕೂಟದಲ್ಲಿ ಪ್ರತಿ ಲೀಟರ್ ಹಾಲಿಗೆ ₹ 31ಗಳ ಉತ್ತಮ ಬೆಲೆ ನೀಡಲಾಗುತ್ತಿದೆ

ಮುಂಡರಗಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ 1984 ರಲ್ಲಿ ಪ್ರಾರಂಭವಾಗಿ ಕಳೆದ 40 ವರ್ಷದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಧಾರವಾಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ ಪ್ರತಿ ದಿನ 1.80 ಲಕ್ಷ ದಿಂದ 1.90 ಲಕ್ಷದವರೆಗ ಹಾಲು ಶೇಖರಣೆಯಾಗುತ್ತದೆ. ನಿತ್ಯವೂ ಅಷ್ಟೇ ಪ್ರಮಾಣದಲ್ಲಿ ಮಾರಾಟ ಆಗುತ್ತಿದೆ ಎಂದು ಧಾರವಾಡ ಕೆಎಂಎಫ್ ಅಧ್ಯಕ್ಷ ಶಂಕರ್ ಮುಗದ ಹೇಳಿದರು.

ಅವರು ಶನಿವಾರ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಬೂದಿಹಾಳ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಕೆಎಂಎಫ್ ನಿಂದ ಸಾಂಧ್ರ ಶೀತಲೀಕರಣ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕರ್ನಾಟಕದಲ್ಲಿರುವ 15 ಒಕ್ಕೂಟಗಳಲ್ಲಿ ಹಾವೇರಿ ಒಕ್ಕೂಟ ಸೇರಿ 16 ಒಕ್ಕೂಟಗಳಾಗಿವೆ. ನಮ್ಮ ಧಾರವಾಡ ಒಕ್ಕೂಟದಲ್ಲಿ ಪ್ರತಿ ಲೀಟರ್ ಹಾಲಿಗೆ ₹ 31ಗಳ ಉತ್ತಮ ಬೆಲೆ ನೀಡಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ₹27, ಬೆಳಗಾವಿಯಲ್ಲಿ ₹ 27, 90 ಪೈಸೆ, ಬಳ್ಳಾರಿಯಲ್ಲಿ ₹ 29, ಶಿವಮೋಗ್ಗ ₹ 29, ಹಾವೇರಿಯಲ್ಲಿ ₹ 29 ನೀಡಲಾಗುತ್ತಿದೆ. ಜತೆಗೆ ಹಾಲು ಒಕ್ಕೂಟದ ಸಹಕಾರಿ ಸಂಘಗಳಿಗೆ ಕೆಎಂಎಫ್ ನಿಂದ ವಿವಿಧ ರೀತಿಯ ಹಣಕಾಸು ಹಾಗೂ ಇತರೆ ಸೌಲಭ್ಯ ಸಹ ನೀಡಲಾಗುತ್ತಿದೆ. ಬೂದಿಹಾಳದಂತಹ ಸಣ್ಣ ಗ್ರಾಮದಲ್ಲಿ ನಿತ್ಯವೂ 900 ಲೀಟರ್ ವರೆಗೆ ಹಾಲನ್ನು ಶೇಖರಣೆ ಮಾಡುತ್ತಿರುವುದ ಶ್ಲಾಘನೀಯ ಕಾರ್ಯವಾಗಿದೆ. ಹೈನುಗಾರಿಕೆ ಒಕ್ಕಲುತನಕ್ಕೆ ಅತ್ಯಂತ ಪ್ರಮುಖ ಉದ್ಯೋಗವಾಗಿದ್ದು, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಸಹಕಾರದಲ್ಲಿ ಜಿಲ್ಲೆಗೆ 2 ಸಾವಿರ ಹಸು ಕೊಡಿಸಲು ಒತ್ತಾಯಿಸುವಂತೆ ನಿರ್ದೇಶಕ ಮಂಡಳಿಯಲ್ಲಿ

ಚರ್ಚಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಮೂಲಕವೂ ಒತ್ತಾಯಿಸಲಾಗುವುದು ಎಂದರು.

ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಮಾತನಾಡಿ, ನಾನು ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಭಾಗದ ಕೆಎಂಎಫ್ ನಿರ್ದೇಶಕನಾಗಿ ಆಯ್ಕೆಯಾಗಿ ಬಂದ ನಂತರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬೂದಿಹಾಳ ಗ್ರಾಮಕ್ಕೆ ಸಾಂಧ್ರ ಶೀತಲೀಕರಣ ಘಟಕ ಬೇಕೆನ್ನುವ ಬೇಡಿಕೆ ಬಂತು.ತಾವು ಈ ಕುರಿತು ತಮ್ಮ ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕ ಮಂಡಳಿಯೊಂದಿಗೆ ಚರ್ಚಿಸಿದ್ದು, ಇದೀಗ‌ ಶೀತಲೀಕರಣ ಘಟಕಕ್ಕೆ ಬೇಕಾದ ಸುಮಾರು ₹15 ಲಕ್ಷಗಳ ಸಾಮಗ್ರಿ ಹಾಗೂ ಕಟ್ಟಡಕ್ಕಾಗಿ ₹5 ಲಕ್ಷ ಸೇರಿ ಧಾರವಾಡ ಕೆಎಂಎಫ್ ನಿಂದ ₹20 ಲಕ್ಷ ಧನ ಸಹಾಯ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ದೊರೆಯುವ ಎಲ್ಲ ಸೌಲಭ್ಯ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಗಂಗಾಪೂರ ಮೃಡಗಿರಿ‌ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮುತ್ತನಗೌಡ ಪಾಟೀಲ ಮಾತನಾಡಿ, ಹೈನುಗಾರಿಕೆ ಅತ್ಯಂತ ಲಾಭದಾಯಕ ಉದ್ಯೋಗವಾಗಿದ್ದು, ಗ್ರಾಮೀಣ ಜನತೆ ಮುಂದಾಗಬೇಕು.ಆದರಿಂದ ಆರ್ಥಿಕವಾಗಿ ಬೆಳೆಯುವುದರ ಜತೆಗೆ ನಮ್ಮ ಜಮೀನುಗಳಿಗೆ ಸಗಣೆ ಗೊಬ್ಬರ ದೊರೆಯಲಿದೆ ಎಂದರು.

ಧಾರವಾಡ ಕೆಎಂಎಫ್ ಎಂಡಿ ಡಾ. ತರ್ಲೆ, ಬೂದಿಹಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೇವೇಂದ್ರಗೌಡ ಪಾಟೀಲ, ಸುರೇಶ ಕುಕನೂರ, ಹಾಲೇಶ ಲಿಂಗಶೆಟ್ಟರ್‌, ಮೈಲಾರಪ್ಪ ಲಿಂಗಶಟ್ಟರ್‌, ಬಾಲಪ್ಪ ರ್ಯಾವಣಕಿ, ಫಾಲಾಕ್ಷಿಗೌಡ ಪಾಟೀಲ, ಚಂದ್ರಗೌಡ ಕಲ್ಲನಗೌಡ್ರ, ಡಾ. ಪ್ರಸನ್, ಡಾ. ರಾಕೇಶ್ ಕಲ್ಲೂರ, ದೇವಪ್ಪ ಕುಕನೂರ, ಶರಣಪ್ಪ ಹಂಚಿನಾಳ, ಶರಣಪ್ಪ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್.ಬಿ. ಪಾಟೀಲ ಸ್ವಾಗತಿಸಿ, ನಿರೂಪಿಸಿದರು.