ವರಕವಿ ಡಾ. ದ.ರಾ. ಬೇಂದ್ರೆ ಅವರಂಥ ಅವಧೂತ ಕವಿಯನ್ನು ಇಡೀ ವಿಶ್ವ ಸಾಹಿತ್ಯಕ್ಕೆ ಕೊಟ್ಟಂತಹ ಹೆಗ್ಗಳಿಕೆ ಬ್ರಿಟಿಷ್‌ ಸರ್ಕಾರದಿಂದ ಸ್ಥಾಪಿತ ವಿಕ್ಟೋರಿಯಾ ಹೈಸ್ಕೂಲ್‌, ಈಗಿನ ವಿದ್ಯಾರಣ್ಯ ಶಾಲೆಗೆ ಸಲ್ಲುತ್ತದೆ.

ಧಾರವಾಡ:

ವರಕವಿ ಡಾ. ದ.ರಾ. ಬೇಂದ್ರೆ ಅವರಂಥ ಅವಧೂತ ಕವಿಯನ್ನು ಇಡೀ ವಿಶ್ವ ಸಾಹಿತ್ಯಕ್ಕೆ ಕೊಟ್ಟಂತಹ ಹೆಗ್ಗಳಿಕೆ ಬ್ರಿಟಿಷ್‌ ಸರ್ಕಾರದಿಂದ ಸ್ಥಾಪಿತ ವಿಕ್ಟೋರಿಯಾ ಹೈಸ್ಕೂಲ್‌, ಈಗಿನ ವಿದ್ಯಾರಣ್ಯ ಶಾಲೆಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪೂರ ಹೇಳಿದರು.

ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿದ್ಯಾರಣ್ಯ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಒಲವೇ ನಮ್ಮ ಬದುಕು ವಿಶೇಷ ಕಾರ್ಯಕ್ರಮ ಉದ್ಘಾಟಿಸಿದ ಅವರು, ಭಕ್ತಿ, ವಾತ್ಸಲ್ಯ, ಪ್ರೇಮ, ಪ್ರೀತಿ ಈ ನಾಲ್ಕು ಬಂಧಗಳಿಂದ ನಿರ್ಮಾಣವಾದ ಸೇತುವೆಯೇ ಒಲವು ಆಗಿದೆ. ಬೇಂದ್ರೆ ಸಾಮಾನ್ಯರಲ್ಲಿ ಅಸಾಮಾನ್ಯ ಕವಿ. ಯಾವುದೇ ವಿಷಯವಿರಲಿ, ಅದನ್ನು ಕರಾರುವಕ್ಕಾಗಿ ಹೇಳುವ ದೈವಿಶಕ್ತಿ ಹೊಂದಿದ್ದರು. ಅವರು ಬರೆಯಲಾರದ ಕಾವ್ಯ ವಸ್ತುವೆ ಇಲ್ಲ, ಸಿಕ್ಕ ವಸ್ತು, ಪಟ್ಟ ಕಷ್ಟಗಳನ್ನೆಲ್ಲ ಕಾವ್ಯವಾಗಿಸಿದ್ದಾರೆ. ಅದರಲ್ಲೂ ಒಲವು ಅವರಿಗೆ ಅತ್ಯಂತ ಪ್ರೀಯ ಸಂಗತಿಯಾಗಿತ್ತು ಎಂದರು.

ವಿದ್ಯಾರಣ್ಯ ಕಾಲೇಜಿನ ಆಡಲಿತ ಮಂಡಳಿ ಅಧ್ಯಕ್ಷ ಡಾ. ಜಿ.ಎಂ. ಪಾಟೀಲ ಮಾತನಾಡಿ, ಬೇಂದ್ರೆಯವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಅಲ್ಲಿ ಗಣಿತ ಪ್ರಾಧ್ಯಾಪಕ ರ‍್ಯಾಂಗ್ಲರ್ ಆರ್.ಪಿ. ಪರಾಂಜಪೆ ಪ್ರಭಾವಕ್ಕೊಳಗಾಗಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿದ್ದರು. ತಮ್ಮ ಜೀವನದ ಕೊನೆಯ ಅವಧಿಯಲ್ಲಿ ಸಂಖ್ಯಾಶಾಸ್ತ್ರದಲ್ಲಿ ಬಹಳಷ್ಟು ಸಂಶೋಧನೆ ಮಾಡಿದ್ದರು. 441 ಸಂಖ್ಯೆಯು ಬೇಂದ್ರೆಯವರಿಗೆ ಅತ್ಯಂತ ಪ್ರೀಯ ಸಂಖ್ಯೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ಪಿಯು ಕಾಲೇಜು ಪ್ರಾಚಾರ್ಯರಾದ ಡಾ. ಶರಣಮ್ಮ ಗೊರೇಬಾಳ, ಬದುಕು ಸುಂದರವಾಗಿರಬೇಕಾದರೆ ಒಲವೇ ಮುಖ್ಯ. ಒಲವು ಎಂದರೆ ಕೇವಲ ಪ್ರೀತಿಯಲ್ಲ ಅದು ಜೀವನದ ಸಾರ್ಥಕತೆ ಎಂದು ಬೇಂದ್ರೆಯವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪ್ರಿಯಾಂಕಾ ಅಂಕಲಿ ನಿರೂಪಿಸಿದರು. ಡಾ. ಭರತ ನಾಯ್ಕ ಪರಿಚಯಿಸಿದರು. ಶ್ವೇತಾ ನಾಯಕ ವಂದಿಸಿದರು. ಟ್ರಸ್ಟ್ ಸದಸ್ಯ ಪ್ರಭು ಕುಂದರಗಿ, ಪ್ರಕಾಶ ಬಾಳಿಕಾಯಿ ಮತ್ತಿತರರು ಇದ್ದರು.