ಕಾಮಣ್ಣನ ಹಬ್ಬಕ್ಕೆ ಧಾರವಾಡ ಜನ ಸಜ್ಜು

| Published : Mar 11 2025, 12:46 AM IST

ಸಾರಾಂಶ

ಧಾರವಾಡದಲ್ಲಂತೂ ಹೋಳಿ ಹುಣ್ಣಿಮೆ ಆಚರಿಸಲು ಯುವ ಜನಾಂಗ ಸಿದ್ಧರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಮುಳಮುತ್ತಲ ಕಾಮಣ್ಣ ಈಗಾಗಲೇ ಭಕ್ತರಿಂದ ಪೂಜೆಗೊಳ್ಳಲು ಸಿದ್ಧನಾಗಿದ್ದಾನೆ.

ಧಾರವಾಡ: ಒಂದೆಡೆ ನೆತ್ತಿ ಸುಡುವ ಬಿಸಿಲು, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕಾವು. ಈ ಮಧ್ಯೆ ಗಂಡು ಮಕ್ಕಳ ಹಬ್ಬವೆಂದೇ ಖ್ಯಾತಿ ಪಡೆದಿರುವ ಹೋಳಿ ಹುಣ್ಣಿಮೆ ಹೊಸ್ತಿಲಲ್ಲಿದ್ದು, ಮೈ ಬಿಸಿ ಏರುತ್ತಿದೆ.

ಧಾರವಾಡದಲ್ಲಂತೂ ಹೋಳಿ ಹುಣ್ಣಿಮೆ ಆಚರಿಸಲು ಯುವ ಜನಾಂಗ ಸಿದ್ಧರಾಗಿದ್ದಾರೆ.

ಧಾರವಾಡ ಗ್ರಾಮೀಣ ಹಾಗೂ ನಗರದಲ್ಲಿ ವಿಶೇಷವಾಗಿ ಕಾಮಣ್ಣನ ಹಬ್ಬ ಆಚರಿಸುತ್ತಿದ್ದು, ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಮುಳಮುತ್ತಲ ಕಾಮಣ್ಣ ಈಗಾಗಲೇ ಭಕ್ತರಿಂದ ಪೂಜೆಗೊಳ್ಳಲು ಸಿದ್ಧನಾಗಿದ್ದಾನೆ.

ಮುಳಮುತ್ತಲ ವಿಶೇಷ

ಭಕ್ತರ ಇಷ್ಟಾರ್ಥ ಸಿದ್ದಿಸುವ ಕಾಮಣ್ಣ ಎಂದೇ ಪ್ರಸಿದ್ದಿ ಪಡೆದಿರುವ ಮುಳಮುತ್ತಲ ಕಾಮಣ್ಣನ ಹಬ್ಬ ಮಂಗಳವಾರದಿಂದ ಶುರುವಾಗಲಿದೆ. ಮಾ. 11ರಂದು ಗ್ರಾಮದ ಬಡಿಗೇರ ಮನೆಯಿಂದ ಆಗಸಿಯ ಮಂಟಪದ ವರೆಗೆ ಕಾಮದೇವರ ಪ್ರತಿಮೆಯನ್ನು ಡೊಳ್ಳು, ಕರಡಿ ಮಜಲು, ಇತರ ಕಲಾಮೇಳಗಳ ಮೆರವಣಿಗೆಯೊಂದಿಗೆ ತರಲಾಗುತ್ತದೆ. ಮಂಗಳವಾರ ಸಂಜೆಯಿಂದ ಸಾರ್ವಜನಿಕರಿಗೆ ಕಾಮದೇವರ ದರ್ಶನವಿರುತ್ತದೆ. ಸಂಜೆ 5ಕ್ಕೆ ಪೂಜ್ಯರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಮಾ. 12ರ ಬುಧವಾರ ಬೆಳಗ್ಗೆ 5ಕ್ಕೆ ಕಾಮದಹನ ನೆರವೇರುವುದು. ಈ ಕಾಮಣ್ಣನ ಪೂಜೆಗೆ ಸುತ್ತಲೂ ಹಳ್ಳಿಯ ಜನರು ಚಕ್ಕಡಿ, ಟ್ರ್ಯಾಕ್ಟರ್‌ ಹಾಗೂ ಇತರೆ ವಾಹನಗಳ ಮೂಲಕ ಬಂದು ದರ್ಶನ ಪಡೆಯುವುದು ವಾಡಿಕೆ. ಅಣ್ಣಿಗೇರಿಯ ಕಾಮಣ್ಣನ ರುಂಡವನ್ನು ಮುಳಮುತ್ತಲ ಗ್ರಾಮದ ಯುವಕನೋರ್ವ ತಂದಿದ್ದು, ಈ ಕುರಿತು ರೋಚಕವಾದ ಕಥೆಯೇ ಇದ್ದು, ಇಂದಿಗೂ ಮುಳಮುತ್ತಲ ಗ್ರಾಮಸ್ಥರು ತಮ್ಮೂರಿನ ಕಾಮಣ್ಣನ ರುಂಡವನ್ನು ಯಾರಾದರೂ ಒಯ್ಯಲು ಬರುತ್ತಾರೆ ಎಂದು ಇಡೀ ರಾತ್ರಿ-ಬೆಳಗಿನ ವರೆಗೆ ಕಾಯುವುದು ವಿಶೇಷ ಹೌದು.

ಇನ್ನು, ಧಾರವಾಡ ನಗರ ಹಾಗೂ ಗ್ರಾಮೀಣದ ಪ್ರತಿ ಬೀದಿ ಬೀದಿಗಳಲ್ಲಿ ಸಾಮಾನ್ಯವಾಗಿ ಕಾಮಣ್ಣನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಈ ಬಾರಿ ಮುಳಮುತ್ತಲ ಹೊರತು ಪಡಿಸಿ ಜಿಲ್ಲೆಯಲ್ಲಿ ಮಾ. 14ರ ಶುಕ್ರವಾರ ಹುಣ್ಣಿಮೆ ದಿನ ಕಾಮಣ್ಣನನ್ನು ಕೂರಿಸಲಾಗುತ್ತದೆ. ಮಾ. 15ರಂದು ಕರಿ ದಿನ ಶನಿವಾರ ಕಾಮದಹನ ಹಾಗೂ ಬಣ್ಣದಾಟ ನಡೆಯಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲಿಗೆ, ಬಣ್ಣ ಎರಚುವ ವಸ್ತುಗಳು ಸೇರಿದಂತೆ ಹಬ್ಬದಾಚರಣೆಗೆ ಬೇಕಾದ ಎಲ್ಲ ವಸ್ತುಗಳು ಮಾರಾಟಕ್ಕಿವೆ.

ಸುಪ್ರಸಿದ್ದ ಭೂಸಪೇಟೆ ಕಾಮಣ್ಣ

ಹಲವಾರು ವರ್ಷಗಳ ಹಿಂದೆ ಯಾವನಾದರೂ ಆಜಾನುಬಾಹು ಸುರದ್ರೂಪಿ ವ್ಯಕ್ತಿ ಮುಖದ ಮೇಲೆ ಹುರಿಕಟ್ಟಿ ಮೀಸೆಹೊಂದಿ, ತಲೆಗೆ ಜರಿ ರುಮಾಲು ಸುತ್ತಿ, ಮೈಮೇಲೆ ರೇಷ್ಮೆ ಜುಬ್ಬ ಧರಿಸಿ, ಜರಿ ಧೋತರ ಉಟ್ಟು, ಕಾಲಲ್ಲಿ ಜಿರ್‌ಜಿರ್‌ ಅನ್ನುವ ಕೆರವು ತೊಟ್ಟವನನ್ನು ಕಂಡರೆ ಜನರು ''''''''ಭೂಸಪ್ಯಾಟಿ ಕಾಮಣ್ಣ ಆಗ್ಯಾನ, ಮಗ'''''''' ಅನ್ನುವ ರೂಢಿಯಿತ್ತು. ಅಷ್ಟು ಸುಪ್ರಸಿದ್ಧ ಧಾರವಾಡದ ಭೂಸ ಪೇಟೆ ಕಾಮಣ್ಣ.

ನೂರಾರು ವರ್ಷಗಳ ಇತಿಹಾಸ

ಇಲ್ಲಿಯ ಮಂಗಳವಾರ ಪೇಟೆಯಲ್ಲಿಯ ಭೂಸಪೇಟೆಯ ಅನೇಕ ಹಿರಿಯರು ಸುಮಾರು 154 ವರ್ಷಗಳ ಹಿಂದೆ ಹೋಳಿ ಹಬ್ಬವನ್ನು ಆಚರಿಸಬೇಕೆಂಬ ಉದ್ದೇಶದಿಂದ ಸುಂದರವಾದ ಕಾಮ, ರತಿಯರ ಕಟ್ಟಿಗೆಯ ಮೂರ್ತಿಗಳನ್ನು ಮಾಡಿಸಿದರು. ಕಾಮಣ್ಣನ ಮೂರ್ತಿ ಆರು ಅಡಿ ಎತ್ತರವಿದ್ದು, ಐದು ಅಡಿ ಅಗಲವಿದೆ. ರತಿಯ ಮೂರ್ತಿ ಐದು ಅಡಿ ಎತ್ತರ, ಮೂರು ಅಡಿ ಅಗಲದಲ್ಲಿ ಜಾನಪದ ಪರಂಪರೆಯ ಶೈಲಿಯಲ್ಲಿವೆ. ಮೂರ್ತಿಗಳ ಅಂಗಾಂಗಳನ್ನು ಬೇರೆ ಬೇರೆಯಾಗಿ ಬಿಡಿಸಿ ಮತ್ತೆ ಜೋಡಿಸಬಹುದಾಗಿದೆ. ಹೋಳಿ ಹುಣ್ಣಿಮೆಯಂದು ಈ ಕಾಮಣ್ಣನ ದಹನವಿಲ್ಲ. ಸಾಂಕೇತಿಕವಾಗಿ ಬೇರೆ ಕಾಮಣ್ಣನ ದಹನ ಮಾಡಲಾಗುವುದು. ಹೀಗಾಗಿ 154 ವರ್ಷಗಳಿಂದ ಅದೇ ಕಾಮಣ್ಣ ಸುಸ್ಥಿತಿಯಲ್ಲಿದ್ದಾನೆ. ವಿಶಿಷ್ಟ ತರಹದ ಕಟ್ಟಿಗೆಯಿಂದ ಮಾಡಿರುವುರಿಂದ ಮೂರ್ತಿಗಳು ಬಿರುಕು ಬಿಟ್ಟಿಲ್ಲ. ಹುಳಗಳ ಪೀಡೆಯೂ ಇಲ್ಲ. ಮೂರ್ತಿಯ ಕಾಯಂ ಕಟ್ಟಡದ ನೆಲಕ್ಕೆ ಟೈಲ್ಸ್ ಕೂಡಿಸಲಾಗಿದೆ. ಸುತ್ತಲು ಆಕರ್ಷಕ ಮಂಟಪವನ್ನು ನಿರ್ಮಿಸಿದ್ದು ಕಣ್ಮನ ಸೆಳೆಯುವಂತಿದೆ. ಅಲಂಕೃತ ಮೂರ್ತಿಯನ್ನು ನೋಡಲು ಹೋಳಿ ಹಬ್ಬದಲ್ಲಿ ಇಡೀ ಊರಿನ ಜನರೇ ಹರಿದು ಬರುತ್ತಾರೆ ಎಂದು ಸ್ಥಳೀಯ ಮುಖಂಡರಾದ ಈರಣ್ಣ ಆಕಳವಾಡಿ ಮಾಹಿತಿ ನೀಡಿದರು. ಹೋಳಿಗೆ ರಾಜಕೀಯ ರಂಗು

ಈಗಾಗಲೇ ಬಿಜೆಪಿ ಮುಖಂಡರು ಹಲಗೆ ಹಬ್ಬಕ್ಕೆ ಚಾಲನೆ ನೀಡಿದ್ದು, ಕೈ ಮುಖಂಡರು ಈ ಕಾರ್ಯಕ್ರಮವನ್ನು ಮಾ. 13ಕ್ಕೆ ಇಟ್ಟುಕೊಂಡಿದ್ದಾರೆ. ಇನ್ನು, ಬಿಜೆಪಿ ಮುಖಂಡರು ಮಾ. 15ರಂದು ಕರ್ನಾಟಕ ಕಾಲೇಜು ವೃತ್ತದಲ್ಲಿ ಗಡಿಗೆ ಒಡೆಯುವ ಹಾಗೂ ರೇನ್‌ ಡ್ಯಾನ್ಸ್‌ ಆಯೋಜಿಸಿದ್ದರೆ, ಕಾಂಗ್ರೆಸ್‌ ಮುಖಂಡರು ಶಿವಾಜಿ ವೃತ್ತದಲ್ಲಿ ಗಡಿಗೆ ಒಡೆಯುವ ಹಾಗೂ ರೇನ್‌ ಡ್ಯಾನ್ಸ್‌ ಇಟ್ಟಿದ್ದು, ಈ ಬಾರಿ ಹೋಳಿ ಹಬ್ಬ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.