ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ರಾಜ್ಯದ ವಿವಿಧ ರಂಗಾಯಣಗಳಿಗೆ ನಿರ್ದೇಶಕರ ಸ್ಥಾನ ತುಂಬಲು ರಂಗ ಸಮಾಜದ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯೋನ್ಮುಖವಾಗಿದೆ. ರಮೇಶ ಪರವೀನಾಯ್ಕರ ಅವರಿಂದ ತೆರವಾದ, ಒಂದೂವರೆ ವರ್ಷದಿಂದ ಖಾಲಿ ಉಳಿದಿರುವ ಧಾರವಾಡ ರಂಗಾಯಣಕ್ಕೆ ಯಾರನ್ನು ಸಮರ್ಥ ಸಾರಥಿಯನ್ನಾಗಿ ನೇಮಿಸುತ್ತಾರೆ ಎಂಬ ಕುತೂಹಲ ಹುಟ್ಟಿದೆ.
ಧಾರವಾಡ ರಂಗಾಯಣ ಸೇರಿ ವಿವಿಧ ರಂಗಾಯಣಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಮಹತ್ವದ ರಂಗ ಸಮಾಜದ ಸಭೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸದ್ಯದಲ್ಲಿಯೇ ನಡೆಯಲಿದ್ದು, ಯಾವುದೇ ಸಾಂಸ್ಕೃತಿಕ ರಾಜಕೀಯ ಒತ್ತಡಕ್ಕೆ ಒಳಗಾಗದೇ ಆಯಾ ಭಾಗದ ರಂಗಾಯಣಗಳಿಗೆ ಆಯಾ ಭಾಗದ ಅರ್ಹ ಕಲಾವಿದರನ್ನೇ ನೇಮಿಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.ಮುಂಚೂಣಿಯಲ್ಲಿವೆ ಇಬ್ಪರ ಹೆಸರು
ಸದ್ಯ ಧಾರವಾಡ ರಂಗಾಯಣಕ್ಕೆ ನಿರ್ದೇಶಕ ಸ್ಥಾನಕ್ಕೆ ಹತ್ತಕ್ಕೂಹೆಚ್ಚು ಅರ್ಜಿಗಳು ಬಂದಿವೆ. ಆದರೆ, ಈ ಪೈಕಿ ಹಿರಿಯ ರಂಗ ಕಲಾವಿದೆ ವಿಶ್ವೇಶ್ವರಿ ಹಿರೇಮಠ ಹಾಗೂ ಹಿರಿಯ ರಂಗಕರ್ಮಿ ಮಹಾದೇವ ಹಡಪದ ಹೆಸರು ಮಾತ್ರ ಕೇಳಿ ಬಂದಿವೆ. ಈ ಇಬ್ಬರ ಪೈಕಿ ಒಬ್ಬರನ್ನು ನಿರ್ದೇಶಕ ಸ್ಥಾನಕ್ಕೆ ನೇಮಿಸಬೇಕೆಂಬ ಆಗ್ರಹಗಳು ಈ ಭಾಗದ ಕಲಾವಿದರಿಂದ ಕೇಳಿ ಬಂದಿವೆ.ಖ್ಯಾತ ಜಾನಪದ ಹಾಡುಗಾರ ಬಸವಲಿಂಗಯ್ಯ ಹಿರೇಮಠ ಅವರ ಪತ್ನಿಯಾಗಿ ವಿಶ್ವೇಶ್ವರಿ ಅವರಷ್ಟೇ ರಂಗಭೂಮಿಯಲ್ಲಿ ಪಳಗಿದವರು. 1984ರಲ್ಲಿಯೇ ನಿನಾಸಂ ಸೇರ್ಪಡೆಯಾಗಿ ರಂಗ ಶಿಕ್ಷಣ ಪಡೆದವರು. ಉತ್ತರ ಕರ್ನಾಟಕದ ಏಕೈಕ ಮಹಿಳಾ ನಿರ್ದೇಶಕರಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ರಂಗ ತರಬೇತಿ ನೀಡಿದ್ದಾರೆ. ಜಾನಪದ ಸಂಶೋಧನಾ ಸಂಸ್ಥೆ ಕಟ್ಟಿಕೊಂಡು ಕಲಾ ಸೇವೆ ಮಾಡುತ್ತಿದ್ದಾರೆ.
ಕಲಾವಿದ ಮಹಾದೇವ ಹಡಪದ ಸಹ ನಿನಾಸಂ ತರಬೇತಿ ಪಡೆದಿದ್ದು ಈಗಲೂ ನಿನಾಸಂ ತಿರುಗಾಟದಲ್ಲಿದ್ದಾರೆ. ಹಂಚಿನಮನೆ ಪರಸಪ್ಪಾ, ಸಾಯೋ ಆಟ, ಸಿದ್ಧರಾಮ, ರಾವಿ ನದಿಯ ದಂಡೆಯಲ್ಲಿ, ಉಚಲ್ಯ ಹತ್ತಾರು ಯಶಸ್ವಿ ನಾಟಕಗಳನ್ನು ನಿರ್ದೇಶನ ಮಾಡಿ ಹೆಸರು ಗಳಿಸಿದ್ದಾರೆ.ಶುರುವಾದ ಸಾಂಸ್ಕೃತಿಕ ರಾಜಕೀಯ:
ರಂಗಾಯಣ ನಿರ್ದೇಶಕರ ನೇಮಕ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮೈಸೂರು ಭಾಗದ ಹಿರಿಯ ರಂಗಕರ್ಮಿಯೊಬ್ಬರು ಬೆಂಗಳೂರು, ಮೈಸೂರು ಭಾಗದ ಕಲಾವಿದರ ಹೆಸರುಗಳನ್ನು ರಾಜ್ಯದ ವಿವಿಧ ರಂಗಾಯಣಗಳಿಗೆ ಸೂಚನೆ ಮಾಡಿ ಸರ್ಕಾರಕ್ಕೆ ಪತ್ರ ಬರೆದಿರುವುದು ಉತ್ತರ ಕರ್ನಾಟಕ ಭಾಗದ ಕಲಾವಿದರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಅದರಲ್ಲೂ ಈಗಾಗಲೇ ಧಾರವಾಡ ರಂಗಾಯಣಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಹೋಗಿರುವ ಹುಲುಗಪ್ಪ ಕಟ್ಟಿಮನಿ ಅವರ ಹೆಸರನ್ನು ಸೂಚಿಸಿರುವುದು ಧಾರವಾಡ ಭಾಗದ ಕಲಾವಿದರ ಪಿತ್ತ ನೆತ್ತಿಗೆ ಏರುವಂತೆ ಮಾಡಿದೆ. ಕಟ್ಟಿಮನಿ ಖ್ಯಾತ ಕಲಾವಿದರು ಹೌದು. ಆದರೆ, ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಧಾರವಾಡ ರಂಗಾಯಣಕ್ಕೆ ಒಂದು ಬಾರಿ ಸೇವೆ ಸಲ್ಲಿಸಿದ್ದು, ಅಗತ್ಯ ಬಿದ್ದರೆ ಕಲಬುರ್ಗಿ ರಂಗಾಯಣಕ್ಕೆ ಸೂಚಿಸಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ನಿಗಮ ಮಂಡಳಿಗಳು ಮಾತ್ರವಲ್ಲದೇ ಅಕಾಡೆಮಿ, ರಂಗಾಯಣ, ಪ್ರತಿಷ್ಠಾನದಂತಹ ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಿಗೂ ರಾಜಕೀಯ ಮುಖಂಡರು, ಪಕ್ಷದ ಕಾರ್ಯಕರ್ತರನ್ನು ನೇಮಿಸುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಸಂಸ್ಕೃತಿ ಶ್ರೀಮಂತಗೊಳ್ಳಲು ಕಾರಣರಾದ ನಿಜವಾದ ರಂಗ ಕಲಾವಿದರಿಗೆ ತೀವ್ರ ಇರಸು ಮುರುಸು ಉಂಟಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಧಾರವಾಡ ಸೇರಿದಂತೆ ರಾಜ್ಯದ ವಿವಿಧ ರಂಗಾಯಣಗಳಿಗೆ ಅರ್ಹ ಕಲಾವಿದರನ್ನು ನೇಮಿಸುವುದೇ ಕಾದು ನೋಡಬೇಕಿದೆ.ತಮ್ಮನ್ನು ರಂಗ ಸಮಾಜದ ಸದಸ್ಯರನ್ನಾಗಿ ನೇಮಿಸಿ ಕೆಲವೇ ದಿನಗಳಾಗಿದ್ದು ಈ ವರೆಗೂ ಒಂದೂ ಸಭೆಯಾಗಿಲ್ಲ. ಆದರೆ, ಧಾರವಾಡ ರಂಗಾಯಣ ಸೇರಿದಂತೆ ರಾಜ್ಯದ ವಿವಿಧ ರಂಗಾಯಣಕ್ಕೆ ಹತ್ತಾರು ಅರ್ಜಿಗಳು ಬಂದಿರುವ ಮಾಹಿತಿ ಇದೆ. ರಂಗ ಸಮಾಜದ ಮೊದಲ ಸಭೆ ಜು. 4ರಂದು ನಿಗದಿಯಾಗಿತ್ತು. ಆದರೆ, ಇದೀಗ ಮುಂದೂಡಿದ್ದು ಅರ್ಹ ಕಲಾವಿದರನ್ನೇ ನೇಮಿಸಲಾಗುವುದು ಎಂದು ರಂಗ ಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಹೇಳಿದರು.