ಸಾರಾಂಶ
ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ಶ್ರೀಮದ್ ಕಣ್ವಮಠ ಹುಣಸಿಹೊಳೆಯಲ್ಲಿ ಯತಿತ್ರಯರ ಪೂರ್ವರಾಧನೆ, ಮಹಿಳೆಯರು ಭಜನಾ ನೃತ್ಯ ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ಹುಣಸಿಹೊಳೆಯ ಕಣ್ವಮಠದ ಶ್ರೀವಿದ್ಯಾಭಾಸ್ಕರ ತೀರ್ಥರು ತಮ್ಮ ಜೀವನವನ್ನು ಶುಕ್ಲಾಯಜುರ್ವೇದಗಳ ಅಧ್ಯಯನದಲ್ಲಿ ತೊಡಗಿಕೊಂಡವರು. ಅಲ್ಲದೇ ಶ್ರೀಮತ್ ಕಣ್ವಮಠಕ್ಕೆ ತಮ್ಮ ಜೀವನವನ್ನೇ ಮೀಸಲಾಗಿರಿಸಿದ ಮಹಾನ್ ಯತಿಗಳು ಎಂದು ಶ್ರೀಮದ್ ಕಣ್ವಮಠದ ಪೀಠಾಧಿಪತಿ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರು ನುಡಿದರು.ತಾಲೂಕಿನ ಕಕ್ಕೇರಾ ಸಮೀಪದ ಶ್ರೀಮದ್ ಕಣ್ವಮಠ ಹುಣಸಿಹೊಳೆಯಲ್ಲಿ ಯತಿತ್ರಯರ ಪೂರ್ವರಾಧನೆಯಲ್ಲಿ ಆಶೀರ್ವಚನ ನೀಡಿದ ಅವರು, ಪೂರ್ವಾಶ್ರಮದಲ್ಲಿ ನ್ಯಾಯವಾದಿಗಳು ಸಂಸ್ಕೃತ ಪಂಡಿತರು, ಮಠದ ಏಳಿಗೆಗಾಗಿ ಭಕ್ತರ ಉದ್ಧಾರಕ್ಕಾಗಿ ಸನ್ಯಾಸತ್ವ ಸ್ವೀಕರಿಸಿ ಶುಕ್ಲಯೇಜುರ್ವೆದ ಹಾಗೂ ಶ್ರೀಮತ್ ಕಣ್ವಮಠದ ಭಕ್ತರಿಗಾಗಿ ಜೀವನ ಸವೆಸಿದರು ಎಂದರು.
ಶ್ರೀಮಠದ 9ನೇ ಪೀಠಾಧಿಪತಿ ಶ್ರೀ 1008 ಶ್ರೀ ವಿದ್ಯಾಭಾಸ್ಕರ ತೀರ್ಥ ಶ್ರೀಪಾದಂಗಳವರ ಪೂರ್ವಾರಾಧನೆ ಪ್ರಯುಕ್ತ ಬೆಳಗ್ಗೆ ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಶುದ್ಧೋದಕ ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಫಲಪುಷ್ಪಗಳಿಂದ ಅಲಂಕಾರ, ಶ್ರೀಮಠದ ವೈದಿಕರಿಂದ ವಿವಿಧ ಪೂಜಾ ಸೇವೆಗಳು ಕೈಕಂರ್ಯಗಳು ಜರುಗಿದವು. ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರಿತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಹರಿನಾಮ ಸ್ಮರಣೆ, ವೇದ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ, ವಿಜಯಪುರದ ಭಜನಾ ಮಂಡಳಿಯಿಂದ ಕೋಲಾಟ, ಭಜನೆ, ಸಂಜೆ ಮಹಾ ಮಂಗಳಾರತಿ ತೊಟ್ಟಿಲ ಸೇವೆ ನಡೆದವು. ಟ್ರಸ್ಟ್ ಅಧ್ಯಕ್ಷ ಮನೋಹರ ಮಾಡಗೇರಿ, ಜಗನ್ನಾಥ ಜೋಶಿ, ಶಂಕರಭಟ್ ಜೋಶಿ, ಪ್ರಸನ್ನ ಆಲಂಪಳ್ಳಿ, ಸುಭಾಷ್ ಮಾಡಗೇರಿ, ಪ್ರಶಾಂತ ಕುಲಕರ್ಣಿ, ರಾಜು ಜೋಶಿ, ಕೃಷ್ಣಾಚಾರ್ ತುರಡಗಿ, ಸುರೇಶ ಕುಲಕರ್ಣಿ ಸೇರಿದಂತೆ ಇತರರಿದ್ದರು.