ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಮನವಿ ಮೇರೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗೆ ಸಹಿ ಹಾಕಲು ಮನವಿ ಮಾಡಿದ್ದೇವೆ. ಅವರೂ ಸಹ ಸಕಾರಾತ್ಮಕ ಸ್ಪಂದನೆ ತೋರಿದ್ದರೂ, ಮಸೂದೆಗೆ ಸಹಿ ಆಗುವ ವರೆಗೂ ಹೋರಾಟ ಮಾತ್ರ ನಿಲ್ಲುವುದಿಲ್ಲ ಎಂದು ಹೋರಾಟಗಾರರು ಹೇಳಿದರು.
ಧಾರವಾಡ:
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಮಂಗಳವಾರ ಹಾಗೂ ಬುಧವಾರದ ಎರಡೂ ತಂಡಗಳು ಭೇಟಿ ಸಂದರ್ಭದಲ್ಲಿ ಹೋರಾಟಗಾರರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಮಂಗಳವಾರ ಸಂಜೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೋರಾಟಗಾರರ ನಿಯೋಗದೊಂದಿಗೆ ಭೇಟಿ ಮಾಡಿ, ನಾವು ಜನರ ಭಾವನೆಗಳಿಗೆ ವಿರೋಧವಾಗಿ ಹೋಗುವುದಿಲ್ಲ. ಹೀಗಾಗಿ ಪ್ರತ್ಯೇಕ ಪಾಲಿಕೆ ವಿಚಾರದಲ್ಲಿ ತಾವು ಉತ್ತಮ ನಿರ್ಣಯ ಕೈಗೊಳ್ಳಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು. ಅಂತೆಯೇ, ಬುಧವಾರ ಸಹ ಸಂತೋಷ ಲಾಡ್ ಜತೆಗೆ 13 ಜನ ಹೋರಾಟಗಾರರು ರಾಜ್ಯಪಾಲರನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆ ರಚನೆಗಾಗಿ ರಾಜ್ಯ ಸರ್ಕಾರ ಕಳಹಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕೆಂದು ಮನವಿ ಸಲ್ಲಿಸಿದರು.
ಆಗ ರಾಜ್ಯಪಾಲರು ಈ ಮಸೂದೆ ವಿಚಾರವಾಗಿ ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನವನ್ನು ಆದಷ್ಟು ಶೀಘ್ರ ತಿಳಿಸುತ್ತೇನೆ ಎಂದು ಸಕಾರಾತ್ಮಕವಾಗಿ ಹೋರಾಟಗಾರರಿಗೆ ಸ್ಪಂದಿಸಿದ್ದಾರೆ ಎಂದು ರಾಜ್ಯಪಾಲರನ್ನು ಭೇಟಿ ಮಾಡಿದ ಹೋರಾಟಗಾರರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಎರಡು ನಿಯೋಗದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಹೋರಾಟಗಾರರಾದ ಬಿ.ಡಿ. ಹಿರೇಮಠ, ವೆಂಕಟೇಶ ಮಾಚಕನೂರ, ವಿಠ್ಠಲ್ ಕಮ್ಮಾರ, ಸಿ.ಎಸ್. ನೇಗಿನಹಾಳ, ದಾನಪ್ಪ ಕಬ್ಬೇರ, ಗುರುರಾಜ ಹುಣಶಿಮರದ, ಆರ್.ಎಂ. ಷಡಕ್ಷರಯ್ಯ, ಪಿ.ಎ. ಪೋಲಿಸ್‌ಪಾಟೀಲ, ಶರಣಪ್ಪ ತಲ್ಲೂರ, ಸಚಿನ್ ಕುಲಕರ್ಣಿ, ವಿ.ಎಲ್. ಪಾಟೀಲ, ಬಸವರಾಜ ಪೂಜಾರ, ಸಂತೋಷ ಪಟ್ಟಣಶೆಟ್ಟಿ, ಮಂಜುನಾಥ ಮಡಿವಾಳರ, ಡಾ. ಜೆ.ಎ. ಜಗೀರದಾರ, ವೀರಪ್ಪ ನೇಗಿನಹಾಳ, ವಿ.ಡಿ. ಕಾಮರಡ್ಡಿ, ನಾಗರಾಜ್ ಗೌರಿ, ಪಾಲಿಕೆ ಸದಸ್ಯ ಡಾ. ಮೋರೆ ಇದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಮನವಿ ಮೇರೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗೆ ಸಹಿ ಹಾಕಲು ಮನವಿ ಮಾಡಿದ್ದೇವೆ. ಅವರೂ ಸಹ ಸಕಾರಾತ್ಮಕ ಸ್ಪಂದನೆ ತೋರಿದ್ದರೂ, ಮಸೂದೆಗೆ ಸಹಿ ಆಗುವ ವರೆಗೂ ಹೋರಾಟ ಮಾತ್ರ ನಿಲ್ಲುವುದಿಲ್ಲ ಎಂದು ಹೋರಾಟಗಾರರು ಹೇಳಿದರು.